ಶಿರಸಿ: ಪ್ರೀತಿಸಿದ್ದ ಹುಡುಗಿ ಕೈಕೊಟ್ಟ ಸಿಟ್ಟಿಗೆ ಆಕೆಯ ಗಂಡನನ್ನು ಬಸ್ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶಿರಸಿ ನಗರ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ. ಸಾಗರ ತಾಲೂಕಿನ ನೀಚಡಿ ಗ್ರಾಮದ ಗಂಗಾಧರ ಎಂಬಾತ ಕೊಲೆಯಾದವರು. ಶಿರಸಿಯ ಧುಂಡಶಿ ನಗರದ ಪ್ರೀತಂ ಇಮ್ಯಾನುವಲ್ ಡಿಸೋಜಾ ಎಂಬಾತ ಕೊಲೆಗೈದ ಆರೋಪಿ.
ಅಂಕೋಲಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ನಲ್ಲಿ ಶಿರಸಿ ಬಳಿ ಘಟನೆ ನಡೆದಿದೆ. 4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಗಂಗಾಧರ, ಪತ್ನಿ ಪೂಜಾ ಅವರೊಂದಿಗೆ ಅಚನಳ್ಳಿಯ ಸಂಬಂಧಿಕರ ಮನೆಗೆ ತೆರಳಿದ್ದರು.
ಇಲ್ಲಿಯ ಹೊಸ ಬಸ್ ನಿಲ್ದಾಣದಲ್ಲಿ ಗಂಗಾಧರ ಅವರು ಪತ್ನಿಯೊಂದಿಗೆ ಬೆಂಗಳೂರಿಗೆ ತೆರಳುವ ಸಲುವಾಗಿ ಬಸ್ ಹತ್ತಿದ್ದರು. ಇದೇ ವೇಳೆ ಪೂಜಾ ಅವರ ಮಾಜಿ ಪ್ರೇಮಿ ಪ್ರೀತಂ ಪ್ರೀತಂ ಸಹ ಅದೇ ಬಸ್ ಹತ್ತಿದ್ದು, ಪೂಜಾಳ ಪತಿ ಗಂಗಾಧರ ಅವರೊಟ್ಟಿಗೆ ಜಗಳ ತೆಗೆದಿದ್ದ. ಬಸ್ ಹೊಸ ಬಸ್ ನಿಲ್ದಾಣದಿಂದ ಹೊರಟು ಜೂ ವೃತ್ತದವರೆಗೆ ಬರುವಷ್ಟರಲ್ಲಿ ಇಬ್ಬರ ನಡುವಿನ ಜಗಳ ಜೋರಾಗಿತ್ತು. ಇಲ್ಲಿಯ ಐದು ರಸ್ತೆ ಸರ್ಕಲ್ ಸಮೀಪ ಬಸ್ ಬರುವಷ್ಟರಲ್ಲಿ ಜಗಳ ತಾರಕಕ್ಕೇರಿತ್ತು. ಆಗ ಪ್ರೀತಂ ಚಾಕು ಹೊರ ತೆಗೆದು ಗಂಗಾಧರ ಅವರ ಎದೆಗೆ ಚುಚ್ಚಿದನು. ಬಿಡಿಸಲು ಬಂದ ಪತ್ನಿ ಪೂಜಾ ಅವರ ಕೈಗೂ ಚಾಕು ತಗುಲಿ ಗಾಯಗಳಾಗಿದೆ. ಇದರಿಂದ ಬಸ್ ಚಾಲಕ-ನಿರ್ವಾಹಕರು ಕಂಗಾಲಾಗಿ ಬಸ್ ನಿಲ್ಲಿಸುತ್ತಿದ್ದಂತೆ ಪಾತಕಿ ಪ್ರೀತಂ ಬಸ್ನಿಂದ ಇಳಿದು ಪರಾರಿಯಾಗಿದ್ದಾನೆ.
ಗಾಯಾಳು ಗಂಗಾಧರ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಎದೆಗೆ ಚುಚ್ಚಿದ್ದರಿಂದ ಹೃದಯದಿಂದ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಕೊಲೆ ಪಾತಕಿ ಪ್ರೀತಂನನ್ನು ಬಂಧಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಪ್ರೀತಂ ಹಾಗೂ ಪೂಜಾ ಪ್ರೀತಿಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳಿದ್ದ ಪೂಜಾ ಅಲ್ಲಿ ಪರಿಚಯವಾಗಿದ್ದ ಗಂಗಾಧರನನ್ನು 4 ತಿಂಗಳ ಹಿಂದೆ ಮದುವೆ ಆಗಿದ್ದರು.
