ಅಂಕನಹಳ್ಳಿಯಲ್ಲಿ ಹೊನ್ನಾರು ಸಂಭ್ರಮ

02kkr(5-24 honnaru ankanahali
Published on

ಕಿಕ್ಕೇರಿ: ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಇತ್ತೀಚೆಗೆ ರೈತರು ಹೊನ್ನಾರನ್ನು ಸಂಭ್ರಮ ಸಡಗರದಿಂದ ಆಚರಿಸಿದರು.


ಈ ಬಾರಿ ಯುಗಾದಿ ಕಳೆದರೂ ಮಳೆ ಬಾರದಾಗಿದೆ. ಹೊಸ ವರ್ಷಾಚರಣೆಯಲ್ಲಿ ಕೃಷಿ ಚಟುವಟಿಕೆ ನಿರ್ವಿಘ್ನವಾಗಿ ನಡೆಯಲು ಮಳೆ ಬರಲು ವರುಣದೇವನ ಪ್ರಾರ್ಥಿಸಿ ಬಸವೇಶ್ವರ ದೇವರಿಗೆ ಮೊದಲ ಪೂಜೆ ಸಲ್ಲಿಸಲಾಯಿತು.


ಕಪ್ಪು ಹಾಗೂ ಬಿಳಿ ಎತ್ತುಗಳನ್ನು ಹುಡುಕಿ ತರಲಾಯಿತು. ಕಪ್ಪು, ಬಿಳಿ ಹಸುಗಳು ಶುಭ ಸಂಕೇತವಾಗಿದ್ದು ಗ್ರಾಮದಲ್ಲಿ ಉತ್ತಮ ಮಳೆ, ಬೆಳೆಯಾಗಲು ತ್ವರಿತವಾಗಿ ಕೃಷಿ ಚಟುವಟಿಕೆ ಆರಂಭವಾಗಲು ದೇವರಲ್ಲಿ ಪ್ರಾರ್ಥಿಸಲಾಯಿತು.


ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಸವರಲಾಯಿತು. ನೊಸಲಿಗೆ ಕುಂಕುಮ ಅರಿಶಿಣ ತಿಲಕವನ್ನು ಇಟ್ಟು ಕೊರಳಿಗೆ ಹೂಮಾಲೆ ತೊಡಿಸಲಾಯಿತು. ಕೊರಳಿಗೆ ಗೆಜ್ಜೆ ಕಟ್ಟಲಾಯಿತು. ಕೊರಳಿಗೆ ನೊಗವನ್ನು ಕಟ್ಟಿ ನೇಗಿಲು ಹೂಡಲಾಯಿತು. ರಾಸುಗಳಿಗೆ ಆರತಿ ಎತ್ತಿ, ಬಾಳೆಹಣ್ಣು ತಿನ್ನಿಸಲಾಯಿತು. ರಾಸುಗಳಿಗೆ ನಮಸ್ಕರಿಸಿ ಹೊನ್ನಾರಿಗೆ ಚಾಲನೆ ನೀಡಲಾಯಿತು.


ತಮಟೆ ವಾದ್ಯದೊಂದಿಗೆ ಹೊನ್ನಾರು ಸಂಭ್ರಮದ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ರಾಸುಗಳಿಗೆ ರೋಗ ರುಜಿನ ಬಾರದಂತೆ, ಗ್ರಾಮದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿ, ಉತ್ತಮ ಬೆಳೆ, ಫಸಲು ಲಭಿಸಲಿ, ರೈತನ ಬದುಕು ಹಸನಾಗಲಿ ಎಂದು ರೈತರು ದೇವರಲ್ಲಿ ಮೊರೆಯಿಟ್ಟರು.


ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಸುಧಾ ದೇವರಾಜು, ಎ.ಬಿ.ಮೂರ್ತಿ, ನಾಗಣ್ಣ, ನಂಜಪ್ಪ, ರಾಜೇಗೌಡ, ರವಿ, ಅಣ್ಣೇಗೌಡ, ಶಿವೇಗೌಡ, ಶರತ್, ರಮೇಶ್, ಅಂಕಿತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net