ಹೊನ್ನಾಳಿ ತಾಲೂಕಿನಲ್ಲಿ 29,764 ಗೃಹಲಕ್ಷ್ಮಿಯರ ನೋಂದಣಿ

hnl gruhalakshmi aug
Published on

ಹೊನ್ನಾಳಿ: ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿ ಹಾಗೂ ನಗರ ಪ್ರದೇಶದಲ್ಲಿ ಆ. 27ರಂದು ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ತಿಳಿಸಿದರು.

ಪಟ್ಟಣದ ಸಾಮರ್ಥ್ಯಸೌಧದಲ್ಲಿ ಗೃಹಲಕ್ಷ್ಮೀ ಯೋಜನೆ ಆಯೋಜನೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಂದು ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 200 ಫಲಾನುಭವಿಗಳು ಹಾಗೂ ನಗರ ಪ್ರದೇಶದಲ್ಲಿ ಕನಿಷ್ಠ 1 ಸಾವಿರ ಅರ್ಹ ಫಲಾನುಭವಿಗಳನ್ನು ಸೇರಿಸುವಂತಹ ಮೈದಾನ ಅಥವಾ ಸಮುದಾಯ ಭವನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳಬೇಕು.

ಯಾವುದೇ ಅಡಚಣೆ ಆಗದಂತೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಪಿಡಿಒ ಹಾಗೂ ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದ ಮೇಲುಸ್ತುವಾರಿ ಅಧಿಕಾರಿ ಸಿಡಿಪಿಒ ಮಹಾಂತೇಶ್ ಪೂಜಾರ್ ಮಾತನಾಡಿ, ಪ್ರತಿ ಗ್ರಾಪಂಗೆ ತಾಲೂಕು ಮಟ್ಟದ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು ಎಂದರು.

ಹೊನ್ನಾಳಿ ತಾಲೂಕಿನಲ್ಲಿ ಒಟ್ಟು 34,952 ಅರ್ಹ ಫಲಾನುಭವಿಗಳಿಗೆ 2 ಸಾವಿರ ರೂ. ನಗದು ನೀಡುವ ಗುರಿ ಹೊಂದಿದೆ. ಆದರೆ, ಇದುವರೆಗೂ 29,764 ಅರ್ಹ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಂದರೆ ಶೇ. 85.15ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ನ್ಯಾಮತಿ ತಾಲೂಕಿನಲ್ಲಿ 22,928 ಫಲಾನುಭವಿಗಳಿಗೆ ನಗದು ಯೋಜನೆ ನೀಡುವ ಗುರಿ ಹೊಂದಲಾಗಿದ್ದು, ಇದುವರೆಗೆ 19,428 ಫಲಾನುಭವಿಗಳು ಮಾತ್ರ ನೋಂದಣಿ ಮಾಡಿಸಿದ್ದಾರೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಪ್ರಭಾರಿ ಇಒ ಪ್ರತಿಮಾ, ತಾಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ, ಬಿಇಒ ನಂಜರಾಜ್, ಡಾ. ವಿಶ್ವನಟೇಶ್, ನಾಗರಾಜ್, ಅರುಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net