ಭಾರತ ಪವಿತ್ರವಾದ ಪುಣ್ಯಭೂಮಿ

hnl purasabhe
Published on

ಹೊನ್ನಾಳಿ: ಭಾರತವೆಂಬುದು ಪವಿತ್ರವಾದ ಪುಣ್ಯಭೂಮಿ, ಕರ್ಮಭೂಮಿ. ಇಂತಹ ಸ್ಥಳದಲ್ಲಿ ಹುಟ್ಟಿರುವ ನಾವೆಲ್ಲಪುಣ್ಯವಂತರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೆಮ್ಮೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಪುರಸಭೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ನನ್ನ ಮಣ್ಣು, ನನ್ನ ದೇಶ’ ಎಂಬ ಈ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರಲ್ಲೂ ದೇಶ ಮೊದಲು ಎನ್ನುವ ಮನೋಭಾವನೆ ಮೂಡಬೇಕು. ಜತೆಗೆ, ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಸ್ವ್ವಾತಂತ್ರೃ ಹೋರಾಟಗಾರರನ್ನು, ಕಾರ್ಗಿಲ್‌ನಲ್ಲಿ ಮೃತರಾದ ಯೋಧರನ್ನು ಗೌರವಿಸುವ ಕೆಲಸವಾಗಬೇಕು.

ದೇಶಪ್ರೇಮ ಕೇವಲ ವೇದಿಕೆಗಳಲ್ಲಿ ಮಾತನಾಡುವುದಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.

ಎಲ್ಲ ಪಾಲಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು, ಉನ್ನತ ಹುದ್ದೆಗೆ ಸೇರಬೇಕು ಎಂದು ಬಯಸುತ್ತಾರೆ.

ಆದರೆ, ವೀರಯೋಧ ಆಗಬೇಕು ಎಂದು ಬಯಸುವುದು ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಮಾತನಾಡಿ, ಹುತಾತ್ಮ ಯೋಧರ ಸ್ಮರಣಾರ್ಥ ಅಮೃತ ಕಳಸ ಯಾತ್ರೆಯನ್ನು ಆಯೋಜಿಸಲಾಗಿದ್ದು, 7500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ತೆಗೆದುಕೊಂಡು ಹೋಗಲಿದ್ದಾರೆ.

ಅದರಂತೆ ನಮ್ಮ ಹೊನ್ನಾಳಿ ನಗರದಿಂದ ಮಣ್ಣನ್ನು ಸಂಗ್ರಹಿಸಿ ದಾವಣಗೆರೆಗೆ ಕಳುಹಿಸಿ ಕೊಡಲಾಗುವುದು ಎಂದರು.

ಪುರಸಭಾ ಸದಸ್ಯರಾದ ಮೈಲಪ್ಪ, ರಾಜೇಂದ್ರ, ವಿಜೇಂದ್ರಪ್ಪ, ತನ್ವಿರ್, ಗಿರೀಶ್, ಕಂದಾಯಾಧಿಕಾರಿ ವಸಂತ್, ಇಂಜಿನಿಯರ್ ದೇವರಾಜ್, ಸಾಮಾಜಿಕ ಕಾರ್ಯಕರ್ತ ಕತ್ತಿಗೆ ನಾಗರಾಜ್, ಪ್ರಜಾಪರಿವರ್ತನೆ ವೇದಿಕೆ ಮುಖಂಡ ಹನುಮಂತಪ್ಪ, ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net