

ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಿ
ಕಲಬುರಗಿ : ಜಿಲ್ಲೆಯಲ್ಲಿ ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು .
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಫಾರೆನ್ಸಿಕ್ ವರದಿ ಕೇಳಲಾಗಿದ್ದು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಇದೊಂದು ಗಂಭೀರ ಪ್ರಕರಣವಾಗಿದ್ದು ಹೆಚ್ಚಿನ ವಿವರ ಈಗಲೇ ಹೇಳಲು ಆಗದು. " ಹನಿಟ್ರ್ಯಾಪ್ ಕಲಬುರಗಿ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದೆ ಎಂದರು.
ಆರೋಪಿಗಳು ಯಾವುದೇ ಸಂಘಟನೆಯವರು ಇರಲಿ ಅಥವಾ ಎಂತದ್ದೆ ವ್ಯಕ್ತಿಗಳಾಗಿರಲಿ, ಪೊಲೀಸ್ ತನಿಖೆ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸೆನ್ ಇಲಾಖೆಗೆ ಸೂಚಿಸಲಾಗಿದೆ. ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಲಿ. ಅಂತವರ ವಿವರ ಹಾಗೂ ಗುರುತು ಗೌಪ್ಯವಾಗಿಡಲಾಗುವುದು " ಎಂದರು.
ಜೂಜಾಟಕ್ಕೆ ಕಡಿವಾಣ
ಜಿಲ್ಲೆಯಲ್ಲಿ ನಡೆಯುತ್ತಿದ್ದ ಜೂಜು ಸೇರಿದಂತೆ ಹಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ 50 ರಷ್ಟು ಕಡಿವಾಣ ಬಿದ್ದಿದೆ. ಸಮಾಜದಲ್ಲಿ ಎಲ್ಲವೂ ಒಮ್ಮೆಲೆ ಸುಧಾರಣೆ ಕಷ್ಟಸಾಧ್ಯ, ಆದರೂ ಇಂತಹ ಚಟುವಟಿಕೆಗಳನ್ನು ಬಂದ್ ಮಾಡಲು ನಮ್ಮ ಪ್ರಾಮಾಣಿಕ ಪ್ರಯತ್ನ ನಡೆದಿರುತ್ತದೆ ಎಂದು ಸಚಿವರು ಹೇಳಿದರು.
ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ
ಸಿಎಂ ಬದಲಾವಣೆ ಚರ್ಚೆ ಸಂಪುಟದಲ್ಲಿ ನಡೆದಿಲ್ಲ ಅದು ಮಾಧ್ಯಮಗಳಲ್ಲಿ ಮಾತ್ರ ನಡೆದಿದೆ. ಸಚಿವರಾದ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲರು ಈ ವಿಚಾರದಲ್ಲಿ ಮಾತನಾಡಿರುವುದು ಗೊತ್ತಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಯಾರೇ ಸಿಎಂ ಆದರೂ ಬೆಂಬಲವಿದೆ ಎಂದಷ್ಟೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಅಧಿಕಾರ ದುರ್ಬಳಕೆ
ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಹಾಗೂ ಬಿಜೆಪಿ ಅಧ್ಯಕ್ಷರು ಈಗ ಮೌನವಾಗಿದ್ದರೆ. ಶಿಕ್ಷಣ ಸಂಸ್ಥೆ ನಡೆಸಲು ಅನಮತಿ ಪಡೆದುಕೊಂಡು ಈಗ ಬಿರಿಯಾನಿ ಹೊಟೇಲ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲೇ ಕ್ರಮ ಜರುಗಿಸುವ ರಾಜ್ಯಪಾಲರು ಈಗ ಏಕೆ ಕ್ರಮ ಜರುಗಿಸಿಲ್ಲ. ಹಾಗೇ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆಯೂ ಕ್ರಮವಿಲ್ಲ ಯಾಕೆ ? ಎಲ್ಲಿ ಬಿಜೆಪಿ ಪಕ್ಷ ಬಲಹೀನವಾಗಿದೆಯೋ ಅಲ್ಲಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸದರು.