ಪ್ರಾಮಾಣಿಕ ಶ್ರಮಕ್ಕೆ ಲಾಭದ ಪ್ರತಿಫಲ

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಮಂಗಳನಾಥ ಸ್ವಾಮೀಜಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮತ್ತಿತರರು ಇದ್ದರು.
22
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಮಂಗಳನಾಥ ಸ್ವಾಮೀಜಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮತ್ತಿತರರು ಇದ್ದರು.
Published on

ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ



ಚಿಕ್ಕಬಳ್ಳಾಪುರ: ಪ್ರಗತಿಪರ ಚಿಂತನೆಗಳೊಂದಿಗಿನ ಪ್ರಾಮಾಣಿಕ ಪರಿಶ್ರಮದಿಂದ ಲಾಭದ ಲ ಸಿಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ದಾಳಿಂಬೆ ಬೆಳೆಗಾರರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ದಾಳಿಂಬೆ ಖರೀದಿ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದು ಕೃಷಿಯಲ್ಲೂ ಅಗತ್ಯವಿದೆ. ಸರಳೀಕರಣ ಕ್ರಮಗಳು, ಕಡಿಮೆ ನಿರ್ವಹಣೆ ವೆಚ್ಚ, ಪರಿಣಾಮಕಾರಿ ಕೆಲಸಗಳಿಗೆ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರೈತರಲ್ಲಿ ಅರಿವು ಅಗತ್ಯ. ಇದಕ್ಕೆ ಮಾರ್ಗದರ್ಶಿ ಕೃಷಿ ಮೇಳ, ಸಮಾವೇಶಗಳಲ್ಲಿ ಭಾಗವಹಿಸಿ, ಹೊಸ ಬೆಳವಣಿಗೆಗಳನ್ನು ಆಧರಿಸಿದ ಮಾಹಿತಿಯನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಎಂ.ನಾಗರಾಜ್ ಮಾತನಾಡಿ, ದಾಳಿಂಬೆಯು ಲಾಭದಾಯಕ ಬೆಳೆಗಳಲ್ಲೊಂದು. ಆದರೆ, ಇತ್ತೀಚೆಗೆ ಹವಾಮಾನ ವೈಪರೀತ್ಯದ ನಡುವೆ ಹೊಸ ಕಾಯಿಲೆಗಳು, ಗುಣಮಟ್ಟದ ಇಳುವರಿ ಕುಸಿತ ಸೇರಿ ನಾನಾ ಸಮಸ್ಯೆಗಳು ಕಂಡುಬಂದು ನಷ್ಟ ಅನುಭವಿಸುವಂತಾಗಿದೆ. ಹಾಗೆಯೇ ಉತ್ತಮ ಪರಿಹಾರ ಕೆಲಸಗಳಿಂದ ಒಳ್ಳೆಯ ಆದಾಯ ಗಳಿಸಬಹುದು. ಇದಕ್ಕೆ ಪ್ರಗತಿಪರ ರೈತರು, ನುರಿತ ತಜ್ಞರು, ವಿಜ್ಞಾನಿಗಳ ಮೂಲಕ ರೈತರಿಗೆ ಮಾರ್ಗದರ್ಶನ, ಪರಸ್ಪರ ಸಂವಾದ, ಇತರ ಭಾಗಗಳಲ್ಲಿ ಬೆಳವಣಿಗೆಗಳ ಮಾಹಿತಿ ಅರಿಯುವಂತಾಗಲು ಸಂಘದಿಂದ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಕರ್ನಾಟಕ ದಾಳಿಂಬೆ
ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಎಂ.ನಾಗರಾಜ್ ಮತ್ತಿತರರು ಇದ್ದರು.

ತಾಂತ್ರಿಕ ಅಧಿವೇಶನಗಳು
ಉತ್ಕೃಷ್ಟ ಗುಣಮಟ್ಟದ ದಾಳಿಂಬೆ ಬೆಳೆಗೆ ಪೀಡೆಗಳ ಸಮಗ್ರ ನಿರ್ವಹಣಾ ಕ್ರಮಗಳ ಬಗ್ಗೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಆಚಾರಿ, ದಾಳಿಂಬೆ ಬೆಳೆಯಲ್ಲಿ ನಿಖರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಜ್ಞ ಡಾ.ಪಿಯೂಷ್ ಕುಮಾರ್ ಮತ್ತು ಡಾ.ಸ್ವಪ್ನಾ ಮಿಶ್ರಾ ಮಾಹಿತಿ ನೀಡಿದರು.

ವಿವಿಧ ಮಳಿಗೆಗಳು
ರೈತರಿಗೆ ಔಷಧ, ಗೊಬ್ಬರ, ಗಿಡಗಳ ನಿರ್ವಹಣೆ, ಕೃಷಿ ಯಂತ್ರೋಪಕರಣಗಳು ಸೇರಿ ವಿವಿಧ ಮಳಿಗೆಗಳನ್ನು ಸ್ಥಾಪಿಸಿದ್ದು, ನಾನಾ ಜಿಲ್ಲೆಗಳ ರೈತರು ಮಾಹಿತಿ ಪಡೆದುಕೊಂಡರು. ತಜ್ಞರ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಕೃತಕ ಬುದ್ಧಿಮತ್ತೆಯಿಂದ ತೋಟಗಳಿಗೆ ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ, ಸೌರ ಇಂಧನದ ಮೂಲಕ ವಿದ್ಯುತ್ ವ್ಯವಸ್ಥೆ, ಕೃಷಿ ಚಟುವಟಿಕೆ ಸರಳೀಕರಣ ಯಂತ್ರೋಪಕರಣಗಳ ಮಳಿಗೆಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net