ತಕ್ಕಪಾಠ ಕಲಿಸುವ ಸಮಯ ಸಮೀಪಿಸುತ್ತಿದೆ

FotoJet
Published on

ಶಾಸಕರ ವಿರುದ್ಧ ಸಿಪಿಎಂ ಮುಖಂಡ ಕಿಡಿ ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಧರಣಿ, ಪ್ರಚಾರ ಆಂದೋಲನಕ್ಕೆ ಚಾಲನೆ

ಬಾಗೇಪಲ್ಲಿ: ಶಾಸಕರ ಭ್ರಷ್ಟಾಚಾರ, ಭೂ ಹಗರಣಗಳ ವಿರುದ್ಧ ಪ್ರಶ್ನಿಸಿ ಹೋರಾಟ ಮಾಡುವ ದಲಿತರು, ಸಂಘ ಸಂಸ್ಥೆಗಳ ಮುಖಂಡರು ಬ್ಲ್ಯಾಕ್‌ಮೇಲರ್‌ಗಳು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸುದ್ದಿ ಮಾಡುವವರು 420 ಪತ್ರಕರ್ತರು ಎಂದು ವಿಷ ಕಾರುತ್ತಿರುವ ಶಾಸಕರೇ, ನಿಮಗೆ ಜನ ತಕ್ಕಪಾಠ ಕಲಿಸುವ ಸಮಯ ಸಮೀಪಿಸುತ್ತಿದೆ ಎಂದು ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ ಶಾಸಕ ಸುಬ್ಬಾರೆಡ್ಡಿ ವಿರುದ್ದ ಕಿಡಿಕಾರಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಫೆ.10ರ ವಿಧಾನಸೌಧ ಚಲೋ ಹಾಗೂ ಅನಿರ್ದಿಷ್ಟಾವಧಿ ಧರಣಿ ಪ್ರಚಾರ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಾರಂ ನಂ. 50, 53, 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರು ಸಾಗುವಳಿ ಚೀಟಿಗಾಗಿ ಪರದಾಡುತ್ತಿದ್ದಾರೆ. ಜಮೀನು ದುರಸ್ತಿಗೆ ಅರ್ಜಿ ಸಲ್ಲಿಸಿದರೆ 1ರಿಂದ 2 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಆದರೆ ಪಾತಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಹೋರಾಟಗಾರರನ್ನು, ದಲಿತರನ್ನು ಬ್ಲ್ಯಾಕ್‌ಮೇಲರ್‌ಗಳು ಎಂದು, ಸಮಾಜವನ್ನು ತಿದ್ದುವ ಪತ್ರಕರ್ತರನ್ನು 420ಗಳು ಎಂದು ಲಘುವಾಗಿ ಮಾತನಾಡಿದ್ದೀರಿ. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಗುರಿ ಮಾಡುವುದನ್ನು ಬಿಟ್ಟು ಜನರ ಕೆಲಸ ಮಾಡಿ. ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಶಕ್ತಿ ಇಲ್ಲದ ನಿಮ್ಮ ಬಗ್ಗೆ ಜನ ತೀರ್ಮಾನ ತೆಗೆದುಕೊಳ್ಳುವ ಸಮಯ ಸಮೀಪಿಸುತ್ತಿದೆ. ಅಲ್ಲಿಯವರೆಗಾದರೂ ಒಳ್ಳೆ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು.

ಸಿಪಿಎಂ ತಾಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ರೈತರಿಗೆ ದರಖಾಸ್ತು ಸಮಿತಿ ಮೂಲಕ ಜಮೀನು ನೀಡಬೇಕಾಗಿರುವ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರು ಭೂ ದಂಧೆಯಲ್ಲಿ ತೊಡಗಿ, ರೈತರಿಗೆ ಕಿರುಕುಳ ಕೊಟ್ಟು ಬೆದರಿಕೆ ಹಾಕುವ ಮೂಲಕ ರೈತರಿಂದ ಅಕ್ರಮವಾಗಿ ಜಮೀನುಗಳನ್ನು ವಶಪಡಿಸಿಕೊಂಡು ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಗುಡಿಬಂಡೆ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಜನಾಂಗದವರು ಉಳುಮೆ ಮಾಡುತ್ತಿರುವ ಜಮೀನು ಹಂಚಿಕೆ ಬಗ್ಗೆ ಖುದ್ದು ಶಾಸಕರೇ ವಿಧಾನಸೌಧ ಅಧಿವೇಶನದಲ್ಲಿ ಚರ್ಚಿಸಿದ್ದರು. ನಂತರ ಅದೇ ಜಮೀನನ್ನು ವ್ಯವಸ್ಥಿತವಾಗಿ ಬುಧವಾರ ಸಂಬಂಧಿಕರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಕ್ಷೇತ್ರದ ಬಡ ಜನರ ಭೂಮಿ, ನಿವೇಶನ, ಮನೆ ಸಮಸ್ಯೆಗಳ ಪರಿಹಾರಕ್ಕಾಗಿ ಫೆ.10ರಂದು ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು, ಕೂಲಿ ಕಾರ್ಮಿಕರು ಸಹಕರಿಸಬೇಕೆಂದು ಕೋರಿದರು.

ಮುಖಂಡರಾದ ಚನ್ನರಾಯಪ್ಪ, ಜಿ.ಟಿ.ಮುನಿಸ್ವಾಮಿ, ಸೋಮಶೇಖರ್, ವಾಲ್ಮೀಕಿ ಅಶ್ವತ್ಥಪ್ಪ, ರಾಮಲಿಂಗಪ್ಪ, ಜಿ.ಕೃಷ್ಣಪ್ಪ, ಬಿಳ್ಳೂರು ನಾಗರಾಜು, ಮುನಿಯಪ್ಪ, ರಫೀಕ್, ಜಿ.ಮುಸ್ತಾ ಮತ್ತಿತರರು ಇದ್ದರು.

ನರೇಗಾ ಆಚರಣೆ ಯಾವ ಪುರುಷಾರ್ಥಕ್ಕೆ?

ಬಾಗೇಪಲ್ಲಿ ತಾಲೂಕಿನ ಕೂಲಿಕಾರ್ಮಿಕರಿಗೆ ಉದ್ಯೋಗ ಕೊಡುತ್ತಿಲ್ಲ. ನರೇಗಾ ಕೂಲಿ ಮಾಡಿರುವವರಿಗೆ ಕೂಲಿ ನೀಡುತ್ತಿಲ್ಲ. ಕೂಲಿಕಾರರ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡುವ ತಾಕತ್ತು ಶಾಸಕರಿಗಿಲ್ಲ. ಕೂಲಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಕೆಲಸ ಕೊಡಲು ಸಾಧ್ಯವಾಗದ ಶಾಸಕರು, ಅಧಿಕಾರಿಗಳು ರೆಸಾರ್ಟ್‌ನಲ್ಲಿ ನರೇಗಾ ದಿನಾಚರಣೆ ಆಚರಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಸಿಪಿಎಂ ಮುಖಂಡ ಮುನಿವೆಂಕಟಪ್ಪ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net