

ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಹಂಪಿ ಭಾಗದಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಆರಂಭದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣರೊಂದಿಗೆ ಚರ್ಚೆ ನಡೆದಿದೆ.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ ನೇತೃತ್ವದಲ್ಲಿ ಚರ್ಚೆ ನಡೆದಿದ್ದು, ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ರೆಸಾರ್ಟ್‌ಗಳಿದ್ದು, ಹೈಕೋಟ್ ತೀರ್ಪು ಹಿನ್ನೆಲೆಯಲ್ಲಿ ಇತ್ತೀಚೆಗೆ ಎಲ್ಲವನ್ನೂ ನೆಲ ಸಮಗೊಳಿಸಲಾಗಿತ್ತು.
ಬದುಕು ಕಟ್ಟಿಕೊಡಿ ಎಂದು ರೆಸಾರ್ಟ್ ಮಾಲೀಕರು ಮತ್ತು ಗುತ್ತಿಗೆದಾರರು ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ಸಕ್ರಮಕ್ಕಾಗಿ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಒತ್ತಾಯಿಸಿದ್ದರು. ತಿಂಗಳೊಳಗೆ ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಎಲ್ಲ ಸಿದ್ಧತೆ ನಡೆದಿದ್ದು, ಬೆಂಗಳೂರಿನಲ್ಲಿ ನಡೆದ ಚರ್ಚೆ ಮಹತ್ವ ಪಡೆದುಕೊಂಡಿದೆ.
ಪ್ರಾಧಿಕಾರ ವ್ಯಾಪ್ತಿಯ ಗ್ರಾಮಗಳಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಅರಂಭಕ್ಕಾಗಿ ತಿದ್ದುಪಡಿ ತರುವ ಯತ್ನ ನಡೆದಿದೆ. ಶಾಸಕದ್ವಯರ ಯತ್ನಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.