ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವು

5GTL2A
Published on

ಗುತ್ತಲ: ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿದ ಘಟನೆ ಸಮೀಪದ ನೆಗಳೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಮರೋಳ ಗ್ರಾಮದ ಶಿವಗಂಗಮ್ಮ ಶಿವನಗೌಡ ಸುಟಮನಿ (70) ಮೃತ ವೃದ್ಧೆ. ನೆಗಳೂರ ಗ್ರಾಮದ ಬಸಪ್ಪ ಫಕೀರಪ್ಪ ಕಡಕೋಳ ಎಂಬುವರ ಮನೆಯ ಹೊರಛಾವಣಿ ಆಕಸ್ಮಿಕವಾಗಿ ಕುಸಿದು ಬಿದ್ದು ವೃದ್ಧೆ ಮಣ್ಣಿನಡಿ ಸಿಲುಕಿಕೊಂಡಿದ್ದರು. ಈ ವೇಳೆ ಛಾವಣಿಯ ಮೇಲಿನ ಮಣ್ಣು ಹಾಗೂ ಕಟ್ಟಿಗೆ ಬಿದ್ದು ವೃದ್ಧೆಯ ತಲೆ ಮತ್ತು ಕಾಲಿಗೆ ಗಾಯವಾಗಿತ್ತು. ಮಣ್ಣಿನಡಿ ಸಿಲುಕಿದ್ದ ವೃದ್ಧೆಯನ್ನು ಅಲ್ಲಿಯೇ ಇದ್ದ ಜನರು ರಕ್ಷಿಸಿದ್ದರು. ನಂತರ ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವೃದ್ಧೆ ಮೃತಪಟ್ಟಿದ್ದಾಳೆ.

ತಪ್ಪಿದ ಭಾರಿ ಅನಾಹುತ: ಮೇಲ್ಛಾವಣಿ ಕುಸಿಯುವ ಕೆಲ ಹೊತ್ತಿನ ಮುಂಚೆ ಈ ಸ್ಥಳದಲ್ಲಿ ಸ್ವ-ಸಹಾಯ ಸಂಘದ ಸುಮಾರು 20 ಸದಸ್ಯೆಯರು ಸಭೆ ನಡೆಸಿ ತೆರಳಿದ್ದರು. ಇದಾದ ನಂತರ ಆರೇಳು ಜನರು ಅಲ್ಲಿಯ ಕುಳಿತುಕೊಂಡು ಕೆಲಸ ಸಮಯ ಪರಸ್ಪರ ಮಾತನಾಡಿ, ತೆರಳಿದ್ದಾರೆ. ಇದಾದ ಕೆಲ ಸಮಯದಲ್ಲಿ ಛಾವಣಿ ಕುಸಿದು ಬಿದ್ದಿದೆ. ವಿಷಯ ತಿಳಿದು ಸಭೆಯ ಮಾಡಿದ್ದ ಹಾಗೂ ಕುಳಿತುಕೊಂಡವರು ದೇವರ ದಯೆಯಿಂದ ಪಾರಾಗಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net