

ಹುಣಸೂರು: ಹುಣಸೂರು-ಮೈಸೂರು ಹೆದ್ದಾರಿ ಸಮೀಪದ ಮನುಗನಹಳ್ಳಿ ಗೇಟ್ ಬಳಿ ಜೋಪಡಿಗಳಲ್ಲೇ ಬದುಕು ನಡೆಸುತ್ತಿರುವ ಇಪ್ಪತ್ತು ಪೌರಕಾರ್ಮಿಕ ಕುಟುಂಬಗಳಿಗೆ ಸರ್ಕಾರ ಶೀಘ್ರ ವಸತಿ ಸೌಕರ್ಯ ಕಲ್ಪಿಸಿಕೊಡುವಂತೆ ದಲಿತ ಸಂಘರ್ಷ ಸಮಿತಿ ಡಾ.ಡಿ.ಜಿ.ಸಾಗರ್ ಬಣದ ಸದಸ್ಯರು ಬುಧವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕೊಳಗಟ್ಟ ಕೃಷ್ಣ ಮಾತನಾಡಿ, ಪೌರಕಾರ್ಮಿಕರಿಗೆ ಇನ್ನೂ ವಸತಿ ಇಲ್ಲದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸಬೇಕಾಗಿದೆ. ಸಮುದಾಯದ ಬಗ್ಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ಸಂಬಂಧ 2023ರ ಡಿಸೆಂಬರ್‌ನಲ್ಲಿ ನಡೆದ ಲೋಕಾಯುಕ್ತ ಅದಾಲತ್‌ನಲ್ಲಿ ದೂರು ನೀಡಲಾಗಿತ್ತು. 10 ದಿನದೊಳಗೆ ವರದಿ ನೀಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರೂ ಈವರೆಗೆ ಯಾವುದೇ ವರದಿ ನೀಡಿಲ್ಲ. ಈಗಲಾದರೂ ಸರ್ಕಾರ ವಸತಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಪೆರುಮಾಳ್, ರಂಗನಾಥ್, ಈರಂಗಯ್ಯ, ಚಾಮುಂಡಯ್ಯ, ನಾಗೇಶ್ ಇತರರು ಹಾಜರಿದ್ದರು.