

ತುಮಕೂರು: ಲಿಂಗೈಕ್ಯ ಶಿವಕುಮಾರ ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯ ಮುಂದುವರೆಸಲು ಮುಂಬರುವ ಬಜೆಟ್ನಲ್ಲಿ ಅನುದಾನ ನೀಡುವ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದು ಗೃಹಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪುತ್ಥಳಿ ನಿಮಾರ್ಣ ಕಾರ್ಯ ನನೆಗುದಿಗೆ ಬಿದ್ದಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಭರವಸೆಯಿತ್ತರು.
ದಾಸೋಹ ದಿನ: ಶ್ರೀಗಳ ಪುಣ್ಯ ಸ್ಮರಣೆ ದಿನವನ್ನು ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸುತ್ತೇನೆ. ಈ ಸಂಬಂಧ ಸಿಎಂ ಜತೆ ಚರ್ಚಿಸುವುದಾಗಿ ಪರಮೇಶ್ವರ ತಿಳಿಸಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳಿಂದ ಕಿರುಕುಳಕ್ಕೊಳಗಾಗಿರುವ ಸಂತ್ರಸ್ತರು ಯಾರು ಇದ್ದಾರೋ ಅವರು ದೂರು ಕೊಟ್ಟರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಡೆಯಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಮೈಕ್ರೋ ಫೈನಾನ್ಸ್ನವರು ನಿಮಯಗಳನ್ನು ಉಲ್ಲಂಘನೆ ಮಾಡಿ ತಪ್ಪು ಮಾಡುತ್ತಿದ್ದಾರೆ. ಪರವಾನಗಿ ಇಲ್ಲದವರ ಬಗ್ಗೆಯೂ ಹಣಕಾಸು ಇಲಾಖೆ ಸಮೀೆ ಮಾಡಬೇಕಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಖಚಿತ ಎಂದು ಪರಂ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ಶಿವಕುಮಾರ ಶ್ರೀಗಳ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಅವರನ್ನು ನಾವು ಯಾವತ್ತೂ ಸ್ಮರಿಸಬೇಕು. ಮಂಗಳವಾರ 6ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ, ಇವತ್ತು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದೇ. ಡಾ.ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ