

ತುಮಕೂರು: ಕಾಂಗ್ರೆಸ್ ಅವಧಿಯಲ್ಲಿ ಕೊಲೆ ಹೆಚ್ಚಾಗಿವೆ ಎಂಬ ಕೇಂದ್ರ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ, ಅದಕ್ಕೆಲ್ಲ ಉತ್ತರ ಕೊಡಬೇಕಾಗಿಲ್ಲ. ಅವರು ಹೇಳಿದಕ್ಕೆಲ್ಲಾ ನಾನು ಉತ್ತರ ಕೊಡ್ಬೇಕಾ. ನಾವು 136 ಸ್ಥಾನ ಗೆದ್ದ ಜೋಶ್‌ನಲ್ಲಿದ್ದೇವೆ ಎಂದು ಟಾಂಗ್ ಕೊಟ್ಟರು.
ನಗರದಲ್ಲಿ ಶನಿವಾರ ಮಧ್ಯಾಹ್ನದ ನಂತರ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಕೆ ಅತ್ತುಕೊಂಡು ಕುತ್ಕೋಬೇಕಿತ್ತಾ. 136 ಜನರನ್ನ ನಮ್ಮ ರಾಜ್ಯದ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಅದೇ ಅವರನ್ನ ಗೆಲ್ಲಿಸಲಿಲ್ಲ, ಆಚೆ ಹಾಕಿದ್ರು. ಅದಕ್ಕೆ ಅವರಿಗೆ ಹೊಟ್ಟೆ ಉರಿ ಇರಬಹುದು, ಅದಕ್ಕೆ ಆ ರೀತಿಯಾಗಿ ಮಾತಾಡ್ತಾರೆ. ನಮಗೆ ಜೋಶ್ ಇದ್ದೆ ಇದೆಯಪ್ಪ ಎಂದರು.
ನಾನು ಅವರಿಗೆ ಲೆಕ್ಕ ಕೊಡ್ತೀನಿ. ಅವರ ಸರ್ಕಾರ ಇದ್ದಾಗ ಎಷ್ಟು ಕೊಲೆ? ಎಷ್ಟು ರೇಪ್? ಕ್ರಿಮಿನಲ್ ಕೇಸ್‌ಗಳು ಎಷ್ಟು ಆಗಿವೆ. ಎಲ್ಲಾ ಲೆಕ್ಕ ಕೊಡ್ತೀವಿ. ನಮ್ಮ ಸರ್ಕಾರದಲ್ಲಿ ಯಾರೆ ಕೊಲೆ ಮಾಡಲಿ, ಮತ್ತೊಂದು ಮಾಡಲಿ. ಕೂಡಲೇ ಹಿಡಿದು ಶಿಕ್ಷೆ ಕೊಡುತ್ತಿದ್ದೀವಿ. ಜೈನ ಮುನಿಗಳನ್ನ ಕೊಲೆಗೈದ ಆರೋಪಿಗಳನ್ನು ಕೇವಲ 6 ಗಂಟೆಯಲ್ಲಿ ಹಿಡಿದು ನ್ಯಾಯಾಲಯಕ್ಕೆ ಹಾಜರು ಪಡಿಸಿದಿವಿ. ಅದರ ಬಗ್ಗೆ ತನಿಖೆ ನಡಿತಿದೆ. ಬೆಂಗಳೂರಿನಲ್ಲಿ ಜೋಡಿ ಕೊಲೆ ಆಯ್ತು. ಅವರನ್ನ ಏಳೇ ಗಂಟೆಯಲ್ಲಿ ಕುಣಿಗಲ್ ಬಳಿ ಬಂಧಿಸಲಾಯಿತು. ಯಾವುದೇ ರೀತಿಯಲ್ಲಿ ಕೊಲೆಗಳು ನಡೆದರು ತತಕ್ಷಣ ಅವರನ್ನ ಹಿಡಿದು ಶಿಕ್ಷೆ ಕೊಡಿಸುವ ಕೆಲಸವನ್ನ ಪೊಲೀಸ್ ಇಲಾಖೆ ಮಾಡುತ್ತಿದೆ. ಸುಮ್ನೆ ಎಲ್ಲೊ ಒಂದು ಕಡೆ ಕಾನೂನು, ಸುವ್ಯವಸ್ಥೆ ಹಾಳಾಗಿ ಹೋಗಿದೆ ಅಂತ ಹೇಳಿಕೆ ಕೊಡ್ತಿದ್ದಾರಲ್ಲ. ಅವರ ಕಾಲದಲ್ಲಿ ಏನಾಗ್ತಿತ್ತು ಅಂತ ಎಲ್ಲಾ ಬಿಡಿಸಿ ಹೇಳ್ತಿವಿ, ಸಂದರ್ಭ ಬರಲಿ ಎಂದು ತಿರುಗೇಟು ಕೊಟ್ಟರು.