ಪ್ರೆಸ್ಟೀಜ್‌ನಿಂದ ಹೊಟ್ಟೆ ತುಂಬಲ್ಲ, ಬಡವರ ಹಸಿವಿನಲ್ಲಿ ರಾಜಕೀಯ ಸಲ್ಲ : ಗೃಹ ಸಚಿವ ಪರಂ

Param_Akki
Published on

ತುಮಕೂರು: ಪ್ರೆಸ್ಟೀಜ್‌ನಿಂದ ಹೊಟ್ಟೆ ತುಂಬಲ್ಲ. ಬಿಜೆಪಿಯವರೇ ಹಣ ಕೊಡಿ ಹಣ ಕೊಡಿ ಎಂದು ಹೇಳಿದ್ರು. ಈಗ ಏಕಾಏಕಿ ಟೀಕೆ ಮಾಡುತಿದ್ದಾರೆ. ಬಡವರ ಹಸಿವಿನಲ್ಲಿ ರಾಜಕೀಯ ಮಾಡಬಾರದೆಂದು ಬಿಜೆಪಿ ಸ್ನೇಹಿತರಲ್ಲಿ ವಿನಂತಿ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಟಾಂಗ್ ಕೊಟ್ಟರು.

ಕೊರಟಗೆರೆಯ ಈದ್ಗಾ ಮೈದಾನದಲ್ಲಿ ಗುರುವಾರ ಬಕ್ರೀದ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಕೊಡುವುದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ನಾವು ಅಕ್ಕಿ ಕೊಡಲೇಬೇಕೆಂದು ತೀರ್ಮಾನ ಮಾಡಿದ್ದೇವೆ. ಕೊಟ್ಟೇ ಕೊಡ್ತಿವಿ. ಅದರಲ್ಲಿ ಎರಡು ಮಾತಿಲ್ಲ. ದುಡ್ಡು ಕೊಟ್ಟರೂ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್‌ಸಿ ಐನಲ್ಲಿ 7 ಲಕ್ಷ ಟನ್ ದಾಸ್ತಾನು ಇದೆ. ಖಾಸಗಿ ಅವರಿಗೆ ಮಾರುತಿದ್ದಾರೆ ಎಂದು ಹರಿಹಾಯ್ದರು.

ಅಕ್ಕಿ ಬದಲಿಗೆ ದುಡ್ಡನ್ನು ರಾಜಕೀಯ ಕಾರಣಕೋಸ್ಕರ ಕೊಡುತ್ತಿಲ್ಲ. ಮೂರು ತಿಂಗಳ ಕಾಲ ದುಡ್ಡು ಕೊಡುತ್ತೇವೆ, ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ. 10 ಕೆಜಿ ಅಕ್ಕಿ ಬದಲಿಗೆ ದುಡ್ಡು ಹಾಕಬೇಕೆಂಬ ಬಿಜೆಪಿಗರಿಗೆ ಈ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಮಾತಿನಂತೆ ನಡೆದುಕೊಳ್ಳುತ್ತೇವೆ. ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿ ಸಲಹೆ ನೀಡಿದಕ್ಕೆ, ದುಡ್ಡು ತಿನ್ನೋಕಾಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದು ಪ್ರತಿಷ್ಟೆ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರೆಸ್ಟಿಜ್ ನಿಂದ ಹೊಟ್ಟೆ ತುಂಬಲ್ಲ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net