

ತುಮಕೂರು: ಸಿದ್ದಗಂಗಾ ಶ್ರೀಗಳ ಆಶೀರ್ವಾದವನ್ನು ಸೋಮಣ್ಣ ಫಿಕ್ಸಿಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಮಾಡಿಕೊಂಡುಬಿಟ್ಟಿದ್ದಾರೆ. ಸಿದ್ದಲಿಂಗ ಶ್ರೀಗಳ ಮೂಲಕ ಇದೀಗ ಎಫ್‌ಡಿ ರಿನಿವಲ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ, ಅಧಿಕಾರದಲ್ಲಾಗಬಹುದು, ಜೀವನದಲ್ಲಾಗಬಹುದು ಯಾವುದೇ ರೀತಿಯಲ್ಲೂ ಸೋಮಣ್ಣ ಭಯ ಪಡುವಂತದ್ದು ಏನೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಭಯ ನೀಡಿದರು.
ಸೋಮಣ್ಣ ಮತ್ತೆ ಮತ್ತೆ ಬರುತ್ತಾನೆ. ರಾಜಕೀಯದಲ್ಲಿ ಸೋಲು-ಗೆಲುವು ಇದ್ದೇ ಇರುತ್ತೇ. ಭವಿಷ್ಯದಲ್ಲಿ ಸೋಮಣ್ಣ ನಿರಾಸೆ ಪಡುವ ಅಗತ್ಯವಿಲ್ಲ, ಅವರಿಗೆ ಉಜ್ವಲ ಭವಿಷ್ಯವಿದೆ ಎಂದೂ ಭಾವಿಸುತ್ತೇನೆ. ಅಧಿಕಾರ ಇರಲಿ, ಹೋಗಲಿ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಸೋಮಣ್ಣ ಜಗ್ಗಿಲ್ಲ. ಅವರು ಎಂತಹ ಸಂದರ್ಭದಲ್ಲು ಬೇರೊಬ್ಬರ ಬಗ್ಗೆ ದೂರು ಹೇಳುವುದಾಗಲಿ, ದೂಷಣೆ ಮಾಡುವುದಾಗಲಿ ಮಾಡುವುದಿಲ್ಲ. ಅವರೊಂತರ ವಿಚಿತ್ರ ಮನುಷ್ಯ. ಮಾರ್ಮಿಕವಾಗಿಯಷ್ಟೇ ಅವರ ನೋವುನ್ನು ಎಲ್ಲರ ಮುಂದೆ ತೋಡಿಕೊಂಡಿದ್ದಾರೆ ಎಂದು ಧೈರ್ಯ ತುಂಬಿದರು.
ಶ್ರೀಮಠದಲ್ಲಿ ನಡೆದ ಗುರುಭವನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ಪರಂ, ಈ ಹಿಂದೆ ಸೋಮಣ್ಣ ನಮ್ಮ ಪಕ್ಷದಲ್ಲೇ ಇದ್ದರು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಂತೆ ಸೋನಿಯಾ ಗಾಂಧಿ ಅವರ ಬಳಿಯು ಹೇಳಿಬಂದಿದ್ದೆ. ಅಷ್ಟರಲ್ಲಿ ಅವರು ಸಂಸದ ಬಸವರಾಜು ಮಾತು ಕೇಳಿ ಬಿಜೆಪಿ ಸೇರಿಕೊಂಡುಬಿಟ್ಟಿದ್ದರು. ಅಲ್ಲಿಯು ಕೂಡ ಒಳ್ಳೆಯದಾಯಿತು. ಶಾಸಕರಾದರು, ಸಚಿವರಾದರು. ಮುಂದೆಯೂ ಕೂಡ ಅವರಿಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ ಎಂದಷ್ಟೇ ಹೇಳಿ ಪರಂ ಮಾತಿಗೆ ವಿರಾಮ ಹೇಳಿದರು.
ಸೋಮಣ್ಣನವರ ಪ್ರೀತಿ, ವಿಶ್ವಾಸ , ಗೌರವ ನನ್ನ, ರಾಜಣ್ಣನನ್ನು ಇಲ್ಲಿಗೆ ಎಳೆದುಕೊಂಡಬಂದಿದೆ. ನಮ್ಮ ತಂದೆಯವರಿಂದ ಸೋಮಣ್ಣ ಪರಿಚಯವಾಗಿದ್ದು ಅಂದಿನಿಂದ ಅವರನ್ನು ನೋಡಿಕೊಂಡುಬಂದಿದ್ದೇನೆ. ಅಧಿಕಾರ ಇರಲಿ, ಹೋಗಲಿ ಅವರೆಂದು ಜಗ್ಗಿಲ್ಲ. ಸೋಮಣ್ಣ ಕುಟುಂಬ ಮಾಡಿರುವ ಗುರುಭವನ ನಿರ್ಮಿಸಿರುವ ಈ ಶ್ರೇಷ್ಠ ಕೆಲಸವು ಶ್ರೀಮಠದ ಇತಿಹಾಸದಲ್ಲಿ ಉಳಿಯುತ್ತೆ ಎಂದರು.