

ಸೋಮವಾರಪೇಟೆ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆಯಲ್ಲಿ ಅಪ್ರಾಪ್ತೆ ಮೀನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮೃತಳ ಕುಟುಂಬದವರನ್ನು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಆರೋಪಿ ಪ್ರಕಾಶನಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮ ತೆಗದುಕೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರದಿಂದ ವಿಶೇಷ ಅಭಿಯೋಜಕರನ್ನು ನೇಮಿಸಿ, ವಿಶೇಷ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಇಂತಹ ಘೋರ ಕೃತ್ಯವನ್ನು ನಡೆಸುವವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯ ಆಗಿದೆ ಎಂದರು.
14 ವರ್ಷದ ಬಾಲಕಿಯನ್ನು 34 ವರ್ಷದ ಯುವಕ ಮದುವೆಯಾಗಲು ಮುಂದಾಗಿದ್ದಾನೆ. ಈ ಕೃತ್ಯಕ್ಕೆ ಉದ್ದೇಶ ಕಾರಣಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಮೇ 9ರಂದು ಮೀನಾಳ ಮನೆಯಲ್ಲಿ ಬಾಲಕಿ ಮತ್ತು ಅರೋಪಿ ಪ್ರಕಾಶ್ ನಡುವೆ ನಿಶ್ಚಿತಾರ್ಥ ನೆರವೇರಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಧ್ಯಪ್ರವೇಶಿ ಸಿ, ಮೀನಾಳ ಮನೆಗೆ ಭೇಟಿ ನೀಡಿ, ವಧು ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷ ಮದುವೆಯಾಗಬಾರದು ಎಂದು ಹೇಳಿದ್ದಾರೆ. ಮದುವೆಯಾದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿ ಹೇಳಿದ್ದಾರೆ. ನಂತರ ಮೀನಾಳಿಗೆ ಯಾಕೇ ರಕ್ಷಣೆ ನೀಡಿಲ್ಲ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸಿದ ಗೃಹಸಚಿವರು, ಪೊಲೀಸ್ ಇಲಾಖೆಯಿಂದ ಎಲ್ಲ ಹಂತದಲ್ಲೂ ತನಿಖೆ ನಡೆಯುತ್ತಿದೆ. ಅಧಿಕಾರಿಗಳಿಂದಲೂ ತಪ್ಪಾಗಿದ್ದರೂ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಯುವತಿಯರು ಮತ್ತು ಬಾಲಕಿಯರ ಹತ್ಯೆ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕರ ಆರೋಪದ ಬಗ್ಗೆ ಪ್ರಶ್ನಿಸಿದಾಗ ಅವರ ಆಡಳಿತದ ಅವಧಿಯಲ್ಲಿ ಎಷ್ಟು ರೇಪು, ಕೊಲೆಗಳು ನಡೆದಿವೆ ಎಂಬುದರ ಬಗ್ಗೆ ಅಂಕಿಅಂಶವನ್ನು ಗಮನಿಸಿದರೆ ಅವರಿಗೆ ಗೊತ್ತಾಗುತ್ತದೆ ಎಂದು ಕುಟುಕಿದರು.
ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನ ಒಳಗೆ ಮೃತಳ ತಂದೆ, ತಾಯಿ, ಸಹೋದರ, ಸಹೋದರಿಯೊಂದಿಗೆ ಮಾತನಾಡಿದ ಗೃಹಸಚಿವರು ಅವರ ಸಂಕಷ್ಟವನ್ನು ಕೇಳಿ ಮರುಗಿದರು. ವೈಯಕ್ತಿಕವಾಗಿ ಒಂದಷ್ಟು ಧನ ಸಹಾಯ ಮಾಡಿದರು.
ಚುನಾವಣಾ ನೀತಿ ಸಂಹಿತೆಯಿರುವ ಕಾರಣ ಸದ್ಯಕ್ಕೆ ಏನನ್ನು ಹೇಳಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊಣವೆಂದು ಹೇಳಿದರು.
ಶಾಸಕ ಎಚ್.ಡಿ.ರೇವಣ್ಣ ಹಾಗು ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ ಗೃಹಸಚಿವರು, ಇಲ್ಲಿಗೆ ಬಂದಿರುವುದು ಅಪ್ರಾಪ್ತೆಯ ಕೊಲೆಯಿಂದ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಲು. ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೊರನಡೆದು ಗ್ರಾಮಸ್ಥರೊಂದಿಗೆ ಚರ್ಚಿಸಲು ಮುಂದಾದರು.
ಶಾಸಕ ಮಂತರ್‌ಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಡಿಜಿಪಿ ಅಮಿತ್‌ಸಿಂಗ್, ಎಸ್.ಪಿ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ಡಿಸಿಸಿ ಮಹಿಳಾ ಅಧ್ಯಕ್ಷೆ ಸುರಯ್ಯ ಅಬ್ರಾರ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್, ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ, ಪ್ರಮುಖರಾದ ಮನು ಮೇದಪ್ಪ, ಮಾದಪುರ ಹರೀಶ್, ಕೆ.ಎ.ಯಾಕುಬ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಕೆ.ಎ.ಆದಂ ಇತರರು ಇದ್ದರು.
ಘಟನೆ ಹಿನ್ನೆಲೆ: ಮೇ 9ರಂದು ಕುಂಬಾರಗಡಿಗೆ ಗ್ರಾಮದ ಕೃಷಿಕ ಸುಬ್ರಮಣಿ ಎಂಬುವರ ಮಗಳು ಮೀನಾ(16) ಹತ್ಯೆಯಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡವನಿಂದ ಭೀಕರ ಹತ್ಯೆಯಾಗಿದ್ದಳು. ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಮೀನಾ ಹತ್ತನೆಯ ತರಗತಿ ವ್ಯಾಸಂಗ ಮಾಡಿದ ಬ್ಬಳೇ ವಿದ್ಯಾರ್ಥಿನಿಯಾಗಿದ್ದಳು. ಮೇ 9ರಂದು ಫಲಿತಾಂಶ ಪ್ರಕಟವಾಗಿದ್ದು ಉತ್ತೀರ್ಣವಾಗುವ ಮೂಲಕ ಶಾಲೆಗೂ ಶೇ.100ರ ಫಲಿತಾಂಶ ದೊರೆತಿತ್ತು. ಅದೇ ದಿನ ಪ್ರಕಾಶ್ ಎಂಬ 34 ವರ್ಷದ ಯುವಕನೊಂದಿಗೆ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿ ಉಂಗುರ ಬದಲಾಯಿಸಿಕೊಂಡಿದ್ದರು. ಮಧ್ಯಾಹ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ಸಿಕ್ಕಿ ಮೀನಾಳ ಮನೆಗೆ ಅಧಿಕಾರಿಗಳು ಆಗಮಿಸಿ, ಎರಡು ಕಡೆಯವರಿಗೆ ತಿಳಿ ಹೇಳಿದರು.
ಅಧಿಕಾರಿಗಳಿಗೆ ಮೀನಾ ಕುಟುಂಬದವರೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ, ಮದ್ಯಪಾನ ಮಾಡಿ ಜಗಳ ತೆಗೆದು ಮೀನಾ ತಾಯಿ ಕೈಗೆ ಕತ್ತಿಯಿಂದ ಹೊಡೆದು ಮೀನಾಳನ್ನು 500 ಮೀಟರ್ ದೂರಕ್ಕೆ ಎಳೆದೊಯ್ದು ರುಂಡವನ್ನು ಕತ್ತರಿಸಿಕೊಂಡು ನಾಪತ್ತೆಯಾಗಿದ್ದ. ನಂತರ ಮೂರು ದಿನಗಳ ನಂತರ ಪೊಲೀಸರಿಗೆ ಶರಣಾಗಿದ್ದ. ಈ ಪೈಶಾಚಿಕ ಕೃತ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿತ್ತು.