

ಉಳ್ಳಾಲ: ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪ ಮಾಡುವವರು ಉಳ್ಳಾಲ ಕ್ಷೇತ್ರದಲ್ಲಿ ಎಷ್ಟು ಕೆಲಸ ಆಗಿದೆ ಎನ್ನುವುದನ್ನು ನೋಡಿ. ಅಭಿವೃದ್ಧಿಗಾಗಿ 4 ಲಕ್ಷ 9 ಸಾವಿರ ಕೋಟಿ ಆಯವ್ಯಯ ನೀಡಲಾಗಿದೆ. ನಾನೇ ಅಧ್ಯಕ್ಷನಾಗಿ ಪಂಚ ಗ್ಯಾರಂಟಿಗಳ ಪ್ರಣಾಳಿಕೆ ಬರೆದಿದ್ದು ಕಾಂಗ್ರೆಸ್‌ನವರಿಗೆ ಮಾತ್ರ ಎಂದು ಬರೆದಿಲ್ಲ. ಆರ್ಥಿಕ ಸಹಾಯಕ್ಕಾಗಿ ತಾಯಂದಿರಿಗೆ ಎರಡು ಸಾವಿರ ಕೊಟ್ಟಿದ್ದು ಇದರಿಂದ ಅನುಕೂಲ ಆಗಿಲ್ಲ, ಕಾಂಗ್ರೆಸ್ ಕಾರ್ಯಕ್ರಮ ನಮಗೆ ಬೇಡ ಎಂದು ಜೆಡಿಎಸ್ ಮತ್ತು ಬಿಜೆಪಿಯವರು ಹೇಳಿದ್ದಾರಾ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ಉಳ್ಳಾಲ ಪಜೀರ್ ಕೈರಂಗಳದಲ್ಲಿ ನಿರ್ಮಿಸಲಾಗುವ ಅಗ್ನಿಶಾಮಕ ಠಾಣಾ ಕಟ್ಟಡದ ಶಿಲಾನ್ಯಾಸ ನೆರವೇರಿಸಲು ಆಗಮಿಸಿದ ಸಂದರ್ಭ ಪತ್ರಕರ್ತರ ಜತೆ ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹಿಂದೆ ಇದ್ದ ನಾಲ್ಕೈದು ಕೋಟಿ ವರಮಾನ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯಿಂದಾಗಿ ಪ್ರಸ್ತುತ 16 ಕೋಟಿಗೇರಿದೆ ಎಂದು ಅಲ್ಲಿಯವರೇ ಹೇಳಿದ್ದಾರೆ. ನಮ್ಮ ಭಾಗದಲ್ಲಿ ಅನ್ನಕ್ಕೂ ಕಷ್ಟ ಇತ್ತು, ಉಚಿತ ಅಕ್ಕಿಯಿಂದಾಗಿ ಈಗ ಅಂಥ ಸಮಸ್ಯೆ ನಿವಾರಣೆಯಾಗಿದೆ. ಇದರ ಪ್ರಯೋಜನ ಆಗಿಲ್ಲ ಎಂದು ಯಾರಾದರೂ ಹೇಳಿದ್ದಾರಾ? ಬಾಯಿಗೆ ಬಂದಂತೆ ಟೀಕೆ ಮಾಡಿದರೆ ಏನು ಪ್ರಯೋಜನ? ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಖಾದರ್ ಗುಣಗಾನ
ಸ್ಪೀಕರ್ ಎನ್ನುವುದು ಕಠಿಣ ಸ್ಥಾನವಾಗಿದ್ದು ನಿಭಾಯಿಸಲು ಮುತ್ಸದ್ದಿತನ ಬೇಕು. ಎಸ್.ಎಂ.ಕೃಷ್ಣರಂಥವರು ಅಧ್ಯಕ್ಷರಾಗಿದ್ದರು. ಖಾದರ್ ಅಧ್ಯಕ್ಷ ಸ್ಥಾನದ ಗೌರವದ ಜತೆ ಉಳ್ಳಾಲದ ಜನತೆಯ ಗೌರವ ಕಾಪಾಡಿದ್ದಾರೆ. ಅವರಿಗೆ ಭವಿಷ್ಯ ಇದ್ದು ಆ ಬಗ್ಗೆ ನಾನು ಹೇಳುವುದಿಲ್ಲ, ಅದನ್ನು ಮೇಲಿನವರು ನೋಡಿಕೊಳ್ಳುತ್ತಾರೆ. ಉಳ್ಳಾಲದ ಅಭಿವೃದ್ಧಿಯನ್ನು 50 ವರ್ಷಗಳ ದೂರದೃಷ್ಟಿಯಲ್ಲಿ ನೋಡಬೇಕಿದೆ. ಇಲ್ಲಿಗೆ ಇನ್ನಷ್ಟು ಶಿಕ್ಷಣ ಸಂಸ್ಥೆ ಬಂದರೆ ಉತ್ತಮ. ರಸ್ತೆ ಇನ್ನೂ ಅಗಲೀಕರಣವಾಗಬೇಕು ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.