ವರ್ಗಾವಣೆ ವಿಚಾರ ಪೊಲೀಸ್ ಮೆಸ್‌ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದ ಗೃಹ ಸಚಿವ ಪರಂ

Param_HDK
Published on

ತುಮಕೂರು: ವರ್ಗಾವಣೆ ವಿಚಾರದಲ್ಲಿ ಪೊಲೀಸ್ ಮೆಸ್‌ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಈ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ನಾನ್ಯೇಕೆ ಉತ್ತರ ಕೊಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಗರಂ ಆದರು.

ನಗರದಲ್ಲಿ ಶನಿವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪಕ್ಕೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ. ಜನರಿಗೆ ಉತ್ತರ ಕೊಡುತ್ತೇನೆ. ರಾಜ್ಯದ ಜನತೆಗೆ ಉತ್ತರ ಕೊಡುತ್ತೇನೆ ಅವರಿಗೇನು ಉತ್ತರ ಕೊಡಬೇಕು. ಅವರು ಸಕಾರಾತ್ಮಕ ಸಲಹೆ ಕೊಡಲಿ, ಸ್ವೀಕಾರ ಮಾಡುತ್ತೇನೆ ಎಂದು ತಿರುಗೇಟು ಕೊಟ್ಟರು.

ರಾಜ್ಯದ ಜನತೆಗೆ ನಾವು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಸ್ವಾಭಾವಿಕವಾಗಿ ವಿರೋಧ ಪಕ್ಷದವರಿಗೆ ಅದು ಇಷ್ಟ ಇಲ್ಲ. ಅದಕ್ಕಾಗಿ ಅವರು ಇಲ್ಲ ಸಲ್ಲದ ಹೇಳಿಕೆ ಕೊಡುತಿದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ. ನಾವು ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಟಿ.ಬಿ.ಜಯಚಂದ್ರರಿಗೆ ಬೆದರಿಕೆ ಕರೆ ಮಾಡಿದವರು ಯಾರೆಂದು ಇನ್ನೂ ಗೊತ್ತಾಗಿಲ್ಲ ಅವರಿಗೆ ಹೆಚ್ಚಿನ ಭದ್ರತೆ ಬೇಕಾ ಎಂದು ಸ್ವತಃ ನಾನೇ ಕೇಳಿದ್ದೇನೆ. ಬೆದರಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಂತಹ ಅಗತ್ಯ ಕಂಡು ಬಂದರೆ ಹೆಚ್ಚಿನ ಭದ್ರತೆ ಒದಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಮೋದಿ ಉಪನಾಮ ಬಳಕೆಗೆ ಸಂಬಂಧ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಸ್ಥಾನದ ಅಮಾನತನ್ನು ಸ್ಪೀಕರ್ ವಾಪಸ್ ಪಡೆಯಬೇಕು. ನ್ಯಾಯಾಲಯ ಆದೇಶ ಹೊರಡಿಸಿದ 24 ಗಂಟೆಯಲ್ಲಿ ಅಮಾನತು ಮಾಡಿದ್ದರು, ಈಗ ಪ್ರಕರಣಕ್ಕೆ ತಡೆಯಾಜ್ಞೆ ಸಿಕ್ಕಿದ್ದು ಸ್ಪೀಕರ್ ತತ್‌ಕ್ಷಣವೇ ಅಮಾನತು ವಾಪಸ್ ಪಡೆಯಲಿ ಎಂದು ಪರಮೇಶ್ವರ ಒತ್ತಾಯಿಸಿದರು.

ಸನ್ನಡತೆಯ ಆಧಾರದ ಮೇಲೆ ಸುಮಾರು 78 ಜನ ಕೈದಿಗಳಿಗೆ ಬಿಡುಗಡೆ ಮಾಡಲಿದ್ದೇವೆ.

ಸಂಪುಟದಲ್ಲಿ ಅನುಮತಿ ಪಡೆದು ರಾಜ್ಯ ಪಾಲರ ಸಹಿಗೆ ಕಳುಹಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net