

ತುಮಕೂರು: ಕಾಂಗ್ರೆಸ್ಸೇ ಒಂದು ಅಶ್ಲೀಲ, ಹಿಂದು ಪದ ಅಶ್ಲೀಲವಲ್ಲ. ಹಿಂದುಗಳಿಗೆ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ಸಿಗರು ಬೆಲೆ ತೆತ್ತಿದ್ದಾರೆ, ಮುಂದೆಯೂ ತೆರುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಇಷ್ಟು ದಿನ ಕಾಂಗ್ರೆಸ್ಸಿಗರು ಹಿಂದುಗಳನ್ನ ಅವಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಮತ ಪಡೆದುಕೊಂಡು ಅಧಿಕಾರದ ಗದ್ದುಗೆ ಮೇಲೆ ಕುಳಿತಿದ್ದರು. ಇದು ಇಡೀ ರಾಜ್ಯ ಹಾಗೂ ದೇಶದ ಜನಕ್ಕೆ ಗೊತ್ತಿದೆ. ಕಾಂಗ್ರೆಸ್ಸೇ ಒಂದು ಅಶ್ಲೀಲ. ಹಾಗಾಗಿ ಜನ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ. ಇನ್ನು 5 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಈ ರೀತಿಯ ವಿವಾದ ಸೃಷ್ಟಿಸುತ್ತಿದೆ. ಇದಕ್ಕೆ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿಂದು ಪದದ ಅರ್ಥ ಅಶ್ಲೀಲವೆಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯನ್ನು ತಾಕತ್ ಇದ್ದರೆ ಪಕ್ಷದಿಂದ ಡಿ.ಕೆ.ಶಿವಕುಮಾರ್ ಹೊರಗೆ ಹಾಕಲಿ. ಮಗುವನ್ನೂ ಚಿವುಟೋದು, ತೊಟ್ಟಿಲನ್ನೂ ತೂಗೋದನ್ನು ಶಿವಕುಮಾರ್ ಮಾಡಬಾರದು. ಹಿಂದು ಧರ್ಮ ಒಟ್ಟಾಗಿ ಇರಲು ಕಾಂಗ್ರೆಸ್ ಬಿಡುವುದಿಲ್ಲ. ಧರ್ಮಗಳನ್ನು ವಿಂಗಡಿಸುವ ಕೆಲಸವನ್ನು ಅವರು ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿತ್ತು. ಅದೇ ರೀತಿ ಸತೀಶ್ ಜಾರಕಿಹೊಳಿ ಮೇಲೆ ಕ್ರಮಕೈಗೊಳ್ಳುವ ಧೈರ್ಯವನ್ನು ಕಾಂಗ್ರೆಸ್ ತೋರಲಿ ಎಂದಿದ್ದಾರೆ.