ಮನೆಮನೆ ಆರೋಗ್ಯ ತಪಾಸಣೆ ಸಮೀಕ್ಷೆ ಶುರು

11-hvr-01
Published on

ವಿಜಯವಾಣಿ ವಿಶೇಷ ಹಾವೇರಿ

ಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಆದರೂ ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿರುವ ಎಲ್ಲ ನಾಗರಿಕರ ಆರೋಗ್ಯ ತಪಾಸಣೆ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ.

ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಶನಿವಾರದಿಂದ ಮನೆಮನೆ ಭೇಟಿ ಕಾರ್ಯಕ್ರಮ ಆರಂಭಗೊಂಡಿದೆ. ಈ ಆರೋಗ್ಯ ತಪಾಸಣೆ ಸಮೀಕ್ಷಾ ಕಾರ್ಯದ ಉಸ್ತುವಾರಿಯನ್ನು ಜಿಪಂ ಸಿಇಒ ಅವರಿಗೆ ವಹಿಸಲಾಗಿದೆ.

ಸಮೀಕ್ಷೆ ಬಹುದೊಡ್ಡ ಸವಾಲು: ಜಿಲ್ಲೆಯಲ್ಲಿ ಅಂದಾಜು 17ಲಕ್ಷದಷ್ಟು ಜನಸಂಖ್ಯೆಯಿದೆ. ಇಷ್ಟು ದೊಡ್ಡ ಮಟ್ಟದ ಜನರ ಆರೋಗ್ಯ ತಪಾಸಣೆಯನ್ನು ಏಕಕಾಲಕ್ಕೆ ನಡೆಸುವುದು ಬಹುದೊಡ್ಡ ಸವಾಲಿನ ಕೆಲಸ. ಆದರೂ ಈ ಕಾರ್ಯವನ್ನು ಸಾಧ್ಯವಾದಷ್ಟು ವೇಗವಾಗಿ ನಡೆಸಿ ಕರೊನಾ ಮಹಾಮಾರಿ ಸಮುದಾಯಕ್ಕೆ ಹರಡದಂತೆ ತಡೆಯುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯ ಆರೋಗ್ಯ ವರದಿಯೂ ಲಭಿಸಲಿದೆ.

ಸಮೀಕ್ಷೆ ಏಕೆ: ಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂಬುವುದು ಸಮಾಧಾನದ ಸಂಗತಿ. ಆದರೆ, ಈವರೆಗೂ ಜಿಲ್ಲಾಡಳಿತ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಿರುವುದು ಜಿಲ್ಲೆಗೆ ಹೊರಗಿನಿಂದ ಬಂದವರಿಗೆ ಮಾತ್ರ. ಅವರಲ್ಲಿ ಪ್ರಾಥಮಿಕ ಹಂತದಲ್ಲಿ ಎಲ್ಲಿಯೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಆದರೆ, ಕೆಲ ಜಿಲ್ಲೆಗಳಲ್ಲಿ ಕರೊನಾ ಮಹಾಮಾರಿ ಎಲ್ಲಿಗೂ ಪ್ರವಾಸ ನಡೆಸದವರಲ್ಲಿಯೂ ಕಂಡುಬಂದಿದೆ. ಹೀಗಾಗಿ ಅಂತಹ ಯಾವುದಾದರೂ ಪ್ರಕರಣಗಳಿದ್ದರೆ, ಅವುಗಳ ಮಾಹಿತಿ ಶೀಘ್ರದಲ್ಲಿ ದೊರೆಯದೇ ಸೋಂಕು ಅನೇಕರಿಗೆ ಹರಡುವ ಸಾಧ್ಯತೆಗಳಿರುತ್ತದೆ. ಆರೋಗ್ಯ ತಪಾಸಣೆ ಸಮೀಕ್ಷೆಯಿಂದ ಯಾರಲ್ಲಿ ಕರೊನಾ ಲಕ್ಷಣಗಳಲ್ಲಿ ಪ್ರಮುಖವಾಗಿರುವ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇದೆ ಎಂಬ ಕುರಿತು ಮಾಹಿತಿ ತಿಳಿಯಲಿದೆ. ಅಂತಹವರನ್ನು ವಿಶೇಷ ತಪಾಸಣೆಗೆ ಒಳಪಡಿಸಿದರೆ ಕರೊನಾ ಮಹಾಮಾರಿಯು ಹೆಚ್ಚಾಗಿ ಹರಡದಂತೆ ತಡೆಯುವುದು ಸುಲಭವಾಗಲಿದೆ ಎಂಬ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ.

ಯಾರ್ಯಾರು ಪಾಲ್ಗೊಳ್ಳಲಿದ್ದಾರೆ: ಈ ಸಮೀಕ್ಷೆ ಕಾರ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ, ವೈದ್ಯಕೀಯ ಸಿಬ್ಬಂದಿ ಜತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಬಳಸಿಕೊಳ್ಳಲು ಜಿಲ್ಲಾಡಳಿತ ರೂಪುರೇಷೆ ತಯಾರಿಸಿದೆ. ಮೊದಲ ಹಂತದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಅವರ ಮಾಹಿತಿಯಲ್ಲಿ ಯಾರಲ್ಲಿ ಕರೊನಾ ಲಕ್ಷಣಗಳು ಕಂಡುಬಂದಿವೆ. ಹೊರಗಿನಿಂದ ಯಾರ್ಯಾರು ಬಂದಿದ್ದಾರೆ ಎಂಬ ಅಂಶಗಳು ಸಿಗಲಿವೆ. 2ನೇ ಹಂತದ ಆರೋಗ್ಯ ಸಮೀಕ್ಷೆಯಲ್ಲಿ ಸಾಮಾನ್ಯ ತಪಾಸಣೆ ನಡೆಸದೇ ಸ್ಟೆಥಸ್ಕೋಪ್ ಬಳಸಿಯೇ ತಪಾಸಣೆ ನಡೆಸಲಾಗುತ್ತದೆ. ಪ್ರಮುಖವಾಗಿ ಉಸಿರಾಟ ಸಮಸ್ಯೆ ಇರುವವರನ್ನು ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ. ಈ ಕಾರ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೊತೆಗೆ ಎಎನ್​ಎಂಗಳು ಪಾಲ್ಗೊಳ್ಳುವರು. ಕೊನೆಯ ಹಂತದಲ್ಲಿ ಕರೊನಾ ಲಕ್ಷಣಗಳಿರುವ ವ್ಯಕ್ತಿಗಳು ಕಂಡುಬಂದಿರುವ ಮನೆಗಳಿಗೆ ನೇರವಾಗಿ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯವೆನಿಸಿದರೆ ಪರೀಕ್ಷೆಗೆ ಶಿಫಾರಸ್ಸು ಮಾಡಲಿದೆ.

ಹಾವೇರಿ ಕೃಷಿ ಪ್ರಧಾನವಾಗಿರುವ ಜಿಲ್ಲೆಯಾಗಿದೆ. ಇಲ್ಲಿ ಸಮುದಾಯಕ್ಕೆ ಕರೊನಾ ಹರಡಿದರೆ ನಿಯಂತ್ರಣ ಕಷ್ಟವಾಗಲಿದೆ. ಈಗಿನಿಂದಲೇ ಕಟ್ಟೆಚ್ಚರ ವಹಿಸಲು, ತಳಮಟ್ಟದ ಜನರ ಆರೋಗ್ಯ ತಪಾಸಣೆ ನಡೆಸಬೇಕು. ಕಾರ್ವಿುಕ ವರ್ಗಗಳಲ್ಲಿ ಅಪೌಷ್ಟಿಕತೆಯ ಅಂಶ ಹೆಚ್ಚಾಗಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕು ಹರಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ವೈಜ್ಞಾನಿಕ ಆರೋಗ್ಯ ತಪಾಸಣೆ ಮಹತ್ವದ್ದಾಗಿರುವುದರಿಂದ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ಸೂಚಿಸಿದ್ದೇನೆ.| ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರುಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂಬುದು ಸಂತಸ ವಿಷಯ. ಆದರೆ, ಅನ್ಯ ಜಿಲ್ಲೆಗಳಲ್ಲಿನ ಕೆಲ ಪ್ರಕರಣ ಗಮನಿಸುತ್ತಿದ್ದರೆ, ಜಿಲ್ಲೆಯಲ್ಲಿಯೂ ಯಾವುದೇ ಕ್ಷಣದಲ್ಲಿ ಸೋಂಕು ಪತ್ತೆಯಾಗಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಶನಿವಾರದಿಂದ ಪ್ರಾಥಮಿಕ ಹಂತದ ಸಮೀಕ್ಷೆ ಆರಂಭಗೊಂಡಿದೆ. ಎಲ್ಲ ತಾಲೂಕುಗಳಲ್ಲಿ ಸಮೀಕ್ಷೆ ರೂಪುರೇಷೆಗಳ ಕುರಿತು ಸಭೆ ನಡೆಸಿ ತ್ವರಿತವಾಗಿ ಸಮೀಕ್ಷೆ ಮುಕ್ತಾಯಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಸಮೀಕ್ಷೆಗೆ 273 ಎಎನ್​ಎಂಗಳು, 1,466 ಆಶಾ, 1,918 ಅಂಗನವಾಡಿ ಕಾರ್ಯಕರ್ತೆಯರು, 224 ಪಿಡಿಒ, 16 ಬಿಎಎಂಎಸ್ ವೈದ್ಯರು, 51 ಎಂಬಿಬಿಎಸ್ ವೈದ್ಯರು, 132 ಕಿರಿಯ ಪುರುಷ ಆರೋಗ್ಯ ಸಹಾಯಕರನ್ನು ತೊಡಗಿಸಿಕೊಳ್ಳಲಾಗುವುದು.| ರಮೇಶ ದೇಸಾಯಿ ಜಿಪಂ ಸಿಇಒ, ಆರೋಗ್ಯ ತಪಾಸಣೆ ಸಮೀಕ್ಷೆ ಜಿಲ್ಲಾ ಉಸ್ತುವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net