

ಕಾರವಾರ: ಪೊಲೀಸರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತುರುವ ಗೃಹರಕ್ಷಕರು ಕೋವಿಡ್ ಅವಧಿಯಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಡಿಎಚ್‌ಒ ಡಾ.ಬಿ.ವಿ.ನೀರಜ್ ಅಭಿಪ್ರಾಯಪಟ್ಟರು.
ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗೃಹರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜೀವರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹರಕ್ಷಕದಳದ ಕೊಡುಗೆ ಮಹತ್ತರವಾದುದ್ದು ಎಂದರು.
ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಸಂಜು ನಾಯಕ ಮಾತನಾಡಿ, ಗೃಹರಕ್ಷಕರು ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆ ಜತೆಗೂಡಿ ತುರ್ತು ಸಂದರ್ಭದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಜಿಲ್ಲೆಯಿಂದ 150 ಗೃಹರಕ್ಷಕರು ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಬಂದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದರು. ತಹಸೀಲ್ದಾರ ನಿಶ್ಚಲ್ ನರೋನಾ, ಆರ್‌ಎಫ್‌ಒ ರಾಘವೇಂದ್ರ ನಾಯ್ಕ ಮಾತನಾಡಿದರು. ಜಿಲ್ಲಾ ಬೋಧಕ ರಘು ಬಿ.ಸಿ. ಪ್ರತಿಜ್ಞಾವಿಧಿ ಬೋಧಿಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ಗೃಹ ರಕ್ಷಕ ಘಟಕ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಅಂಬೇವಾಡಿ ರೈಲು ನಿಲ್ದಾಣದ ಹೆಸರು ಬದಲು