

ನ್ಯಾಮತಿ: ನ್ಯಾಮತಿ ಪಟ್ಟಣದ ವಿವಿಧೆಡೆ ಕಳೆದೆರೆಡು ದಿನಗಳಿಂದ ನಡೆಯುತ್ತಿರುವ ಸರಣಿ ಕಳ್ಳತನದಿಂದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ದೇವಾಲಯ ಹಾಗೂ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ನಗ, ನಗದು ದೋಚಿ ಪರಾರಿಯಾಗಿದ್ದಾರೆ. ಕೆಲವೆಡೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಭಾನುವಾರ ತಡರಾತ್ರಿ ಪಟ್ಟಣದ ಕಾಳಿಕಾಂಬ ದೇವಾಲಯಕ್ಕೆ ನುಗ್ಗಿ, ಗುರುಪೂರ್ಣಮಿ ಹಿನ್ನೆಲೆಯಲ್ಲಿ ಕಾಳಿಕಾಂಬ ಶಿಲಾಮೂರ್ತಿಗೆ ಹಾಕಿದ್ದ ಚಿನ್ನದ ತಾಳಿ ಹಾಗೂ ಉಚ್ಚಂಗೆಮ್ಮ, ಮೂಕಾಂಬಿಕಾ ದೇವಿಯ ಹುಂಡಿ ಕಳವು ಮಾಡಿದ್ದಾರೆ.
ನಂತರ, ಪಟ್ಟಣದ ವಿಶ್ವೇಶ್ವರಯ್ಯ ಬೀದಿಯ ಯಶೋದಮ್ಮ ಅವರ ಮನೆಯಲ್ಲಿ 200 ಗ್ರಾಂ ಬೆಳ್ಳಿ ದೀಪಗಳು ಹಾಗೂ ಅರಿಶಿಣ ಕುಂಕುಮ ಬಟ್ಟಲು ಹಾಗೂ 2.15 ಲಕ್ಷ ರೂ. ಸಾವಿರ ನಗದು ಕಳವಾಗಿದೆ.
ಅದೇರಾತ್ರಿ, ಮಾರಿಕಾಂಬ ದೇವಸ್ಥಾನ ರಸ್ತೆಯ ಚಂದ್ರಮ್ಮ ಅವರ ಮನೆಯಲ್ಲಿ 80 ಸಾವಿರ ರೂ. ನಗದು ಮತ್ತು 3 ಗ್ರಾಂ ತೂಕದ ಆಭರಣ ಕಳ್ಳತನ ಮಾಡಲಾಗಿದೆ. ಜತೆಗೆ, ಮಾರಿಕಾಂಬ ರಸ್ತೆಯ ನಿವಾಸಿ ರಾಜೆಂದ್ರಪ್ಪ ಅವರ ಮನೆಯಲ್ಲಿ 5 ತೊಲ ಬಂಗಾರ ಆಭರಣ ಕದ್ದೊಯ್ದಿದ್ದಾರೆ.
ಪಟ್ಟಣದ ಗಜೇಂದ್ರ, ಚಂದ್ರಹಾಸ ಲೇಔಟ್ ಏಕನಾಥ ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಮನೆಯವರು ಎಚ್ಚರವಾಗಿದ್ದರಿಂದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮನೆಯೊಂದರ ಸಿಸಿ ಟಿವಿಯಲ್ಲಿ ಕಳ್ಳರ ಚಲನವಲನ ಪತ್ತೆಯಾಗಿದ್ದು, ಮುಖಕ್ಕೆ ಮಂಕಿ ಟೋಪಿ, ಪಂಜೆ ಹಾಕಿಕೊಂಡು ನಾಲ್ವರು ಓಡಾಡಿದ್ದಾರೆ.
ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ಸೋಮವಾರ ದಾಖಲಾಗಿದೆ.
ದಾವಣಗೆರೆಯ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ವಿಶೇಷ ತಂಡದಿಂದ ಶೋಧಕಾರ್ಯ ನಡೆಸಲಾಗಿದೆ. ದಾವಣಗೆರೆ ಎಎಸ್‌ಪಿ ಮಂಜುನಾಥ, ನ್ಯಾಮತಿ ಪಿಐ ಎನ್.ಎಸ್. ರವಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಮಂಗಳವಾರ ಮತ್ತೊಂದು ಕಳ್ಳತನ
ಪಟ್ಟಣದ ಅಂಚೆ ಕಚೇರಿ ಹಿಂಭಾಗದ ರಸ್ತೆ ನಿವಾಸಿ ಹನುಮಂತರಾವ್ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿದೆ. ಮನೆ ಮಾಲೀಕರು ಬೆಂಗಳೂರಿಗೆ ಹೋಗಿದ್ದು, ಪಕ್ಕದ ಮನೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾವ ವಸ್ತುಗಳ ಕಳ್ಳತನವಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.