

ಬೆಂಗಳೂರು: ಹಾಲಿವುಡ್ ಸಿನಿಮಾ ಸ್ಟೈಲ್ನ ಡ್ರಗ್ಸ್ ಮಾಫಿಯಾ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಅದರ ಒಂದು ಎಳೆ ಈಗ ಬಿಚ್ಚಿಕೊಂಡಿದೆ. ಬರೋಬ್ಬರಿ 3.3 ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್, ಅಪೀಮು, ಎಲ್.ಎಸ್.ಡಿ ಸ್ಟ್ರಿಪ್ಸ್, ಎಂಡಿಎಂಎ ಗಳನ್ನು ವಶಪಡಿಕೊಂಡಿರುವ ಸಿಟಿ ಮಾರ್ಕೆಟ್ ಪೊಲೀಸರು, ಇಬ್ಬರು ಬಂಧಿಸಿದ್ದಾರೆ.
ಬಂಧಿತರನ್ನು ರಾಜಾರಾಮ್ ಮತ್ತು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಅವರಿಂದ 1.280 ಕಿಲೋ ಬ್ರೌನ್ ಶುಗರ್, 475 ಗ್ರಾಂ ಅಪೀಮು, 25 ಎಲ್ಎಸ್ಡಿ ಸ್ಟ್ರಿಪ್ಸ್, 32 ಗ್ರಾಂ ಎಂಡಿಎಂಎ ಫಾಯಿಲ್ ರೋಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾರಾಮ್ ಬೆಂಗಳೂರಿನ ಮಾಗಡಿ ನಿವಾಸಿಯಾದರೆ, ಸುನೀಲ್ ಕುಮಾರ್ ಕುಂಬಳಗೋಡು ನಿವಾಸಿ. ಇಬ್ಬರ ಮನೆ ಮೇಲೆ ದಾಳಿ ನಡೆಸಿದಾಗ ಒಟ್ಟು 3.3 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ.
ಮೆಟಲ್ ರೇಲಿಂಗ್ನಲ್ಲಿ ಇವುಗಳನ್ನು ತುಂಬಿಸಿ ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಿಸ್ತಾ ಇದ್ರು. ಮೆಟಲ್ ರೇಲಿಂಗ್ ಲೋಡ್ ಬರುವಾಗ ಅದರಲ್ಲಿ ಒಂದೆರಡು ಪೀಸ್ಗಳನ್ನು ಮಾರ್ಕ್ ಮಾಡಿ ಕಳುಹಿಸಲಾಗುತ್ತಿತ್ತು. ಅದರಲ್ಲಿ ಡ್ರಗ್ಸ್ ಇರುವುದು ಖಚಿತವಾಗುತ್ತಿತ್ತು. ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲೇ ಟೊಳ್ಳು ರೇಲಿಂಗ್ ಒಳಭಾಗದಲ್ಲಿ ಡ್ರಗ್ಸ್ ತುಂಬಿ ಡಿಟೆಕ್ಟರ್ಗಳ ಕಣ್ತಪ್ಪಿಸಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಇದೇ ರೀತಿ ಲಗೇಜ್ ಬ್ಯಾಗ್ನ ಕೆಳಭಾಗದ ಸ್ಟಿಚ್ ಹರಿದು ಅಲ್ಲಿ ಡ್ರಗ್ಸ್ ತುಂಬಿ ಮತ್ತೆ ಹೊಲಿದು ಆ ಮೂಲಕವೂ ಡ್ರಗ್ಸ್ ಸಾಗಿಸುತ್ತಿರುವುದನ್ನು ಆರೋಪಿಗಳು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್)