

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಜುಲೈ 19ರಿಂದ 22ರವರೆಗೆ ಭಾರಿ ಮಳೆಯೊಂದಿಗೆ 35 ಕಿ.ಮೀ.ಯಿಂದ 45 ಕಿ.ಮೀ. ಅಥವಾ 55 ಕಿ.ಮೀ ವೇಗದಲ್ಲಿ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜುಲೈ 19ರಂದು ಜಿಲ್ಲಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ. ಜಿಲ್ಲೆಯ ಎಲ್ಲ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ, ಕಾಪು, ಬ್ರಹ್ಮಾವರ, ಉಡುಪಿ, ಬೈಂದೂರು ಹಾಗೂ ಕಾರ್ಕಳ ತಾಲೂಕಿನಲ್ಲಿ 33 ಮನೆ, 2 ಕೊಟ್ಟಿಗೆ ಹಾಗೂ ಇಬ್ಬರು ಕುಟುಂಬದ ಕೃಷಿ ತೋಟ ಭಾಗಶಃ ಹಾನಿಯಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯಲ್ಲಿರುವ ಮನೆಯೊಂದರ ಮೇಲೆ ತೆಂಗಿನಮರ ಬಿದ್ದು ಮೂವರು ಗಾಯಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಅಂಪಾರು, ಮೊಳಹಳ್ಳಿ, ಹಾಲಾಡಿ ಭಾಗದಲ್ಲಿ ಬೆಳೆ ನಷ್ಟವಾಗಿದೆ.
ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಿಗೂ ಕಟ್ಟೆಚ್ಚರದಲ್ಲಿ ಇರುವಂತೆ ಸೂಚಿಸಲಾಗಿದೆ. ಅಲ್ಲದೆ, ಎಚ್ಚರಿಕೆಯ ಸಿಗ್ಲಲ್ ನಂ-3 ಅಳವಡಿಸಿಕೊಳ್ಳುವಂತೆಯೂ ಸಲಹೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 86.08 ಮಿ.ಮೀ. ಸರಾಸರಿ ಮಳೆಯಾಗಿದೆ. ಕಾರ್ಕಳ- 97.02 ಮಿ.ಮೀ., ಕುಂದಾಪುರ- 83.08, ಉಡುಪಿ- 52.07, ಬೈಂದೂರು- 125.04, ಬ್ರಹ್ಮಾವರ- 63.06, ಕಾಪು- 74.08 ಹಾಗೂ ಹೆಬ್ರಿ ತಾಲೂಕಿನಲ್ಲಿ 76.08 ಮಿ.ಮೀ. ಮಳೆಯಾಗಿದೆ.
ಕಾಸರಗೋಡು ಜಿಲ್ಲೆಯ ರಾಜ್ಯ, ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು, ಮದರಸಗಳಿಗೆ ಜುಲೈ 19ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ. ಕಾಲೇಜುಗಳಿಗೆ ರಜೆ ಅನ್ವಯವಾಗುವುದಿಲ್ಲ. ಪೂರ್ವನಿಗದಿತ ಪರೀಕ್ಷೆಗಳಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ.