ರಾಜಧಾನಿಗೆ ಪ್ರಧಾನಿ ಆಗಮನ, ನಾಳೆ ಇವರಿಗೆಲ್ಲ ರಜೆ..

PM Modi
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೂ. 20ರ ಸೋಮವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಪ್ರಯಾಣಿಸುವ ಮಾರ್ಗ, ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತ ಪ್ರದೇಶಗಳ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಸರ್ಕಾರ ರಜೆ ಘೋಷಿಸಿದೆ.

ಪ್ರಧಾನಿ ಪ್ರಯಾಣಿಸುವ ಮಾರ್ಗದಲ್ಲಿ ಸಂಚಾರದಟ್ಟಣೆ ಆಗುವುದನ್ನು ತಡೆಯಲು ಹಾಗೂ ಸುರಕ್ಷತಾ ಕ್ರಮಗಳನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಪೊಲೀಸ್ ಇಲಾಖೆಯ ಸೂಚನೆಯಂತೆ ಪ್ರಧಾನಿ ಸಂಚರಿಸುವ ಐಐಎಸ್‌ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ಹೊರ ವರ್ತುಲ ರಸ್ತೆ, ಡಾ. ರಾಜ್‌ಕುಮಾರ್ ಸ್ಟುಡಿಯೋ, ಲಗ್ಗೆರೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಆರ್‌ವಿ ಕಾಲೇಜು, ನಾಗರಭಾವಿ, ಸುಮ್ಮನಹಳ್ಳಿ ಸೇತುವೆ, ಎಂಸಿಐ ಜಂಕ್ಷನ್, ಗೋವರ್ಧನ್ ಥಿಯೇಟರ್, ಯಶವಂತಪುರ ಮತ್ತು ಜಕ್ಕೂರು ಏರೋಡ್ರಮ್ ಮತ್ತು ಸುತ್ತಮುತ್ತ ಪ್ರದೇಶಗಳ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಿದೆ.

ಅದೇ ರೀತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಧಾನಿ ಸಂಚರಿಸುವ ಮಾರ್ಗಗಳು ಮಾತ್ರವಲ್ಲದೆ ಇಡೀ ಬೆಂಗಳೂರಿನಲ್ಲಿರುವ ತನ್ನ ವ್ಯಾಪ್ತಿಯ ಎಲ್ಲಾ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ರಜೆ ನೀಡಿದೆ. ಅಲ್ಲದೆ, ಸೋಮವಾರ ನಿಗದಿಯಾಗಿದ್ದ ವಿವಿಧ ಪರೀಕ್ಷೆಗಳನ್ನು ಮುಂದೂಡಿದ್ದು ಶೀಘ್ರವೇ ಪರಿಷ್ಕೃತ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.

ಇನ್ನು, ಬೆಂಗಳೂರು ವಿಶ್ವವಿದ್ಯಾಲಯ ಕೂಡ ತನ್ನ ಕ್ಯಾಂಪಸ್‌ನಲ್ಲಿ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ವಿವಿಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗೂ ರಜೆ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net