

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಹೋಳಿ ಹಬ್ಬದ ಆಚರಣೆ ಸಂಭ್ರಮಾಚರಣೆ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕಡಿಮೆ. ಆದರೆ ಕರಾವಳಿಯ ಹಲವೆಡೆ ನೆಲೆಸಿರುವ ಮರಾಠಿ ಹಾಗೂ ಕುಡುಬಿ ಜನಾಂಗದವರು ಮಾತ್ರ ತಲೆತಲಾಂತರದಿಂದ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ.
ಪ್ರತಿ ವರ್ಷದ ಮಾ.10ರಂದು ಹೋಳಿ ಆರಂಭಗೊಳ್ಳಲಿದ್ದು, ಮಾ.14ರಂದು ಕೊನೆಗೊಳ್ಳುತ್ತದೆ. ಪ್ರತಿ ಹೋಳಿ ತಂಡಕ್ಕೆ ಗುರಿಕಾರ ಇದ್ದು, ತಂಡದ ಎಲ್ಲ ಸದಸ್ಯರು ಗುರಿಕಾರನ ಮನೆಯಲ್ಲಿ ಜತೆಸೇರಿ ಅಭ್ಯಂಜಗೈದು ಹೋಳಿ ವೇಷ ಧರಿಸುತ್ತಾರೆ. ಬಳಿಕ ಕೈಯಲ್ಲಿ ಗುಮ್ಟೆಗಳನ್ನು ಹಿಡಿದು ಗುರಿಕಾರರ ಮನೆಯ ತುಳಸಿ ಕಟ್ಟೆಯಲ್ಲಿ ದೇವರ ಪ್ರತಿಷ್ಠಾಪಿಸಿ ಕುಡುಬಿ ಭಾಷೆಯ ಸಾಲುಗಳೊಂದಿಗೆ ಕುಲ ದೇವರ ಹಾಡುಗಳ ಮೂಲಕ ಆರಾಧಿಸಲಾಗುತ್ತದೆ. ಬಳಿಕ ತಮ್ಮ ಕುಲದೇವರು ಮಲ್ಲಿಕಾರ್ಜುನನ್ನು ತಂಡದ ಯಜಮಾನ ಪೂಜಿಸಿ ಸರ್ವಸದಸ್ಯರ ಹಣೆಗೆ ಕುಂಕುಮ ಹಚ್ಚುತ್ತಾನೆ. ತದನಂತರ ರಾಮಾಯಣ, ಮಹಾಭಾರತದ ಕತೆಗಳನ್ನು ಪದ್ಯದ ಮೂಲಕ ಹೋಳಿ ಕುಣಿತ ಆರಂಭಿಸುತ್ತಾರೆ.
ಮೊದಲ ಕುಣಿತ ಸಂಪ್ರದಾಯ ಪ್ರಕಾರ ಗುರಿಕಾರನ ಮನೆಯಲ್ಲೇ ನಡೆಯಲಿದ್ದು, ಬಳಿಕ ಗ್ರಾಮದೇವತೆ ಗುಡಿ, ಪ್ರಮುಖ ದೇವಸ್ಥಾನ, ಊರಿನ ಪರಂಪರೆಯ ಮನೆತನದ ಮನೆಗಳಿಗೆ ಸಾಗಿ ಕುಣಿತದ ಪ್ರದರ್ಶನವನ್ನು ನೀಡಲಾಗುತ್ತದೆ. ಈ ವೇಳೆ ತಂಡದ ಸದಸ್ಯರಿಗೆ ಅಕ್ಕಿ, ವೀಳ್ಯದೆಲೆ, ಅಡಕೆ, ತೆಂಗಿನಕಾಯಿ, ಕಾಣಿಕೆಗಳನ್ನು ನೀಡಿ ಗೌರವದಿಂದ ಬೀಳ್ಕೊಡಲಾಗುತ್ತದೆ.
ಕೆಲವೊಂದು ತಂಡಗಳಲ್ಲಿ ಗರಿಷ್ಠ 150 ಮಂದಿ ಇರುತ್ತಾರೆ. ಐದು ದಿನಗಳವರೆಗೆ ಹಗಲು ರಾತ್ರಿ ತಿರುಗಾಟ ಮಾಡಿ ಹುಣ್ಣಿಮೆಯಂದು ಮೇಳವು ಮರಳಿ ಹತ್ತರ ಕಟ್ಟೆ ಸೇರುತ್ತದೆ. ಈ ಸಂಧರ್ಭದಲ್ಲಿಯೂ ಹಲವು ಕ್ರಮಗಳಿವೆ. ನಂತರ ಸಾಮೂಹಿಕ ಸ್ನಾನ ಕಾಮದಹನ ಮುಖ್ಯ ಸಂಪ್ರದಾಯಗಳು ನಡೆಯುತ್ತವೆ. ಹೋಳಿ ಹುಣ್ಣಿಮೆಯಂದು ಪುನಃ ಗುರಿಕಾರರ ಮನೆಯಲ್ಲಿ ಒಗ್ಗೂಡಿ ತಂಡ ಪ್ರದರ್ಶನ ನೀಡಲಾಗುತ್ತದೆ. ಬಳಿಕ ವೇಷ ಕಳಚಿ ಕಾಮದಹನ ನಡೆಸಿ ಸಿಹಿ ಭೋಜನ ಊಟ ಮಾಡುವು ಮೂಲಕ ಹಬ್ಬ ಸಮಾಪ್ತಿಗೊಳ್ಳುತ್ತದೆ.
ಬಾರಕೂರು, ಕೊಕ್ಕರ್ಣೆ, ಗೋಳಿಯಂಗಡಿ, ಆವರ್ಸೆ, ಶಂಕರನಾರಾಯಣ, ಹಿಲಿಯಾಣ, ಅಮಾವಾಸೆಬೈಲು, ಚೇರ್ಕಾಡಿ, ಆರೂರು, ಕುಂಜಾಲು, ಸಂತೆಕಟ್ಟೆ, ಹೆಬ್ರಿ, ಪೆರ್ಡೂರು, ಕಾರ್ಕಳ, ಹಿರಿಯಡ್ಕ, ಪರ್ಕಳ, ಮುಂತಾದ ಕಡೆಗಳಲ್ಲಿ ಮರಾಠಿ ಸಮುದಾಯದವರಿದ್ದಾರೆ. ಸಾಬ್ರಕಟ್ಟೆ, ಮಂದಾರ್ತಿ, ಕೊಕ್ಕರ್ಣೆ, ಮುದ್ದೂರು, ಯಡ್ತಾಡಿಮುಂತಾದ ಕಡೆಗಳಲ್ಲಿ ಕುಡುಬಿ ಸಮುದಾಯದವರಿದ್ದಾರೆ. ಮರಾಠಿ ಮತ್ತು ಕುಡುಬಿ ಸಮುದಾಯದ ನಡುವೆ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾವಿದ್ದರೂ ಬಹುತೇಕ ಪದ್ಧತಿಗಳಲ್ಲಿ ಸಾಮ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ 46 ಕುಡುಬಿ ಕೂಡುಕಟ್ಟುಗಳಿವೆ. ಗರಿಷ್ಠ 250 ತಂಡದಿಂದ 3500-4000 ಜನರು ವೇಷ ತೊಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಪೀಳಿಗೆಯು ಸಂಸ್ಕೃತಿಗೆ ಧಕ್ಕೆ ಬಾರದಂತೆ ಅನುಸರಿಸಿಕೊಂಡು ಹೋಗಬೇಕಾದ್ದು ಧಾರ್ಮಿಕ ಹಿನ್ನೆಲೆಯಲ್ಲಿ ಅನಿವಾರ್ಯ. ನಾರಾಯಣ ನಾಯ್ಕ ಗೋಳಿಯಂಗಡಿ ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸಂಘ ಕಾರ್ಯದರ್ಶಿ.