

ಬಳ್ಳಾರಿ: ಗೃಹ ಜ್ಯೋತಿ ಸಬ್ಸಿಡಿ ಹಣ ಸರ್ಕಾರದಿಂದ ಎಸ್ಕಾಂಗಳಿಗೆ ಪಾವತಿಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಗೃಹ ಜ್ಯೋತಿ ಹಣ, ಗೃಹ ಲಕ್ಷ್ಮಿ ಹಣ ಎಲ್ಲವನ್ನೂ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದರು.
ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್. ಕೆ ಪಾಟೇಲ್, "ಗ್ಯಾರಂಟಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತೇವೆ. ಪಾವತಿಯಾಗದ ಗೃಹ ಜ್ಯೋತಿ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಿರುವ ಶಿಸ್ತಿನ ವ್ಯವಸ್ಥೆ ಏನಿದೆಯೋ ಅದರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಯಾರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ತೇವೆ" ಎಂದರು.
"ಗ್ಯಾರಂಟಿಯಿಂದ ಹೊರೆಯಾಗೋದು ಬೇರೆ ವಿಚಾರ. ಆದರೆ, 58 ಸಾವಿರ ಕೋಟಿ ಹಣ ಅಂದ್ರೆ ಸಣ್ಣ ಮೊತ್ತ ಅಲ್ಲ. ರಾಜ್ಯದ ಜನರಿಗಾಗಿಯೇ ಈ ಗ್ಯಾರಂಟಿ ಪ್ರಾರಂಭ ಮಾಡಿದ್ದೇವೆ. ನಮಗೆ ಬದ್ದತೆ ಇದೆ, ಮುಂದುವರಿಸುತ್ತೇವೆ. ನಮ್ಮ ಪಕ್ಷದ ಯಾವು ಶಾಸಕರೂ ಗ್ಯಾರಂಟಿ ವಿರುದ್ಧವಿಲ್ಲ. ಯಾರೂ ಕಡಿತ ಮಾಡಿ ತಕರಾರು ತೆಗೆದಿಲ್ಲ" ಎಂದರು.
"ಸಿಎಂ ಬದಲಾವಣೆ, ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಚರ್ಚೆ, ಪ್ರಸ್ತಾಪ ಮಾಡಲು ಬಯಸಿಲ್ಲ. ಈ ಬಗ್ಗೆ ಯಾರೂ ಮಾತಾಡಬೇಡಿ ಎಂಬ ಸೂಚನೆಯಿದೆ. ಖರ್ಗೆ ಅವರು ಹೇಳಿದ ನಂತರ ಸಚಿವ ರಾಜಣ್ಣನೂ ಸುಮ್ಮನಾಗಿದ್ದಾರೆ. ದೆಹಲಿಗೆ ಹೋಗೋರು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ. ನಾವು ಶಿಸ್ತಿನ ಪಕ್ಷದವರು. ನಾವು ಪಕ್ಷದ ಸೂಚನೆ ಪಾಲನೆ ಮಾಡುತ್ತೇವೆ" ಎಂದರು.
ಇನ್ನು ದಲಿತ ನಿಗಮಗಳಿಗೆ ಹಣ ಬಿಡುಗಡೆ ಮಾಡದ ವಿಚಾರಕ್ಕೆ ಸ್ಪಂದಿಸಿದ ಅವರು, "ಇನ್ನೇನು ಹತ್ತು ದಿನದಲ್ಲಿ ಬಜೆಟ್ ಮಂಡನೆ ಆಗಲಿದೆ. ಇದಕ್ಕೆ ಉತ್ತರ ಬಜೆಟ್ನಲ್ಲೇ ಸಿಗಲಿದೆ" ಎಂದು ಹೇಳಿದರು.