ಎಚ್‌ಐವಿ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆ

bkt-30-5
Published on

ಬಾಗಲಕೋಟೆ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದು, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಹೋಲಿಸಿದರೆ, ಸಾಮಾನ್ಯರಲ್ಲಿ ಶೇ.೧.೮೩ ರಿಂದ ಶೇ.೧.೧೫ಕ್ಕೆ ಇಳಿಮುಖ ಕಂಡುಬಂದರೆ, ಗರ್ಭಿಣಿಯರಲ್ಲಿ ಶೇ.೦.೦೮ ರಿಂದ ಶೇ.೦.೦೬ಗೆ ಇಳಿಕೆ ಕಂಡುಬಂದಿದೆ.
ಜಿಲ್ಲೆಯಲ್ಲಿ ಒಟ್ಟು ೧೨ ಐಸಿಟಿಸಿ ಕೇಂದ್ರಗಳು, ೬೦ ಏಫ್‌ಐಸಿಟಿಸಿ ಕೇಂದ್ರಗಳು, ಖಾಸಿ ಸಹಭಾಗಿತ್ವದಲ್ಲಿ ಐಸಿಟಿಸಿ ಕೇಂದ್ರಗಳು ೩೪ ಇವೆ. ಜಿಲ್ಲೆಯಲ್ಲಿ ಒಟ್ಟು ೩ ಲೈಂಗಿಕ ರೋಗ ಪತ್ತೆ ಕೇಂದ್ರ (ಸುರಕ್ಷಾ ಕ್ಲಿನಿಕ್) ಗಳಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ಮುಧೋಳ ಮತ್ತು ಜಮಖಂಡಿಯಲ್ಲಿ ತಲಾ ಒಂದು ಇವೆ. ಜಿಲ್ಲೆಯಲ್ಲಿ ೧೦ ರಕ್ತನಿಽ ಕೇಂದ್ರಗಳಿದ್ದು, ಅದರಲ್ಲಿ ಒಂದು ಸರ್ಕಾರಿ ಉಳಿದ ೯ ಖಾಸಗಿ ರಕ್ತನಿಧಿ ಕೇಂದ್ರಗಳಿವೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಮುಧೋಳ, ಜಮಖಂಡಿ, ಹುನಗುಂದದಲ್ಲಿ ತಲಾ ಒಂದು ಎ.ಆರ್.ಟಿ ಕೇಂದ್ರಗಳಿವೆ. ಈ ಕೇಂದ್ರಗಳ ಅಡಿಯಲ್ಲಿ ಪ್ರಾರಂಭದಿಂದ ಅಕ್ಟೋಬರ ೨೦೨೨ರ ಅಂತ್ಯದ ವರೆಗೆ ೩೪೭೦೦ ಸೋಂಕಿತರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಈ ಪೈಕಿ ಚಿಕಿತ್ಸೆ ಪ್ರಾರಂಭಿಸಿದ್ದು ೨೯೧೯೭, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರು ೧೬೮೫೧ ಜನ ಇದ್ದಾರೆ ಎಂದು ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ೯೧೮೬೯ ಜನರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ೫೭೦ ಜನರಲ್ಲಿ ಪಾಜಿಟಿವ್ ಕಂಡುಬಂದಿದೆ. ಸಾಮಾನ್ಯ ಜನರಲ್ಲಿ ೪೭೦೯೨ ಪರೀಕ್ಷೆಯ ಪೈಕಿ ೫೪೩ ಸೋಂಕು ಕಂಡುಬಂದರೆ, ಗರ್ಭಿಣಿಯರಲ್ಲಿ ೪೪೭೭೭ ಪರೀಕ್ಷೆಯ ಪೈಕಿ ೨೭ ಸೋಂಕು ಕಂಡುಬಂದಿರುತ್ತದೆ. ಸೋಂಕು ದೃಢಪಟ್ಟ ೫೭೦ ಜನರು ಎ.ಆರ್.ಟಿ. ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು ಮಾತ್ರೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ರಕ್ತದಾನ ಶಿಬಿರ, ರಕ್ತದಾನಿಗಳ ದಿನಾಚರಣೆ, ಹೋಡ್ಲಿಂಗ್ಸ್ ಹಾಗೂ ರೆಡಿಯೋ ಕಾರ್ಯಕ್ರಮಗಳ ಮೂಲಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ೧೯೮೮ ರಿಂದ ಡಿಸೆಂಬರ ೧ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದ್ದು, ೨೦೧೧ ರಿಂದ ಎಚ್‌ಐವಿ/ಏಡ್ಸ್ ಸೋಂಕನ್ನು ಸೋನ್ನೆಗೆ ತರಲು ಎಚ್‌ಐವಿ/ಏಡ್ಸ್ನಿಂದ ಉಂಟಾಗುತ್ತಿರುವ ಸಾವನ್ನು ಸೊನ್ನೆಗೆ ತರಲು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ವರ್ಷ *ಏಡ್ಸನ್ನು ಅಂತ್ಯಗೊಳಿಸಲು ಅಸಮಾನತೆಗಳನ್ನು ಕೊನೆಗಾಣಿಸಲು, ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡಲು ಹಾಗೂ ಪ್ರತಿಯೊಬ್ಬರನ್ನು ಖುಷಿಯಾಗಿಡಲು ವಿಶ್ವವು ಒಂದಾಗಬೇಕಿದೆ ಘೋಷಣೆಯಡಿ ಏಡ್ಸ್ ದಿನ ಆಚರಿಸಲಾಗುತ್ತಿದೆ. ಎಚ್‌ಐವಿ ಸೋಂಕಿತರ ಜೀವನದಲ್ಲಿ, ಸಮಾಜದಲ್ಲಿ ಹಾಗೂ ವಿಶ್ವದಲ್ಲಿ ಇತರೆಡೆ ಆಗುತ್ತಿರುವ ಆಗು ಹೋಗುಗಳ ಬಗ್ಗೆ ನಾವೆಲ್ಲಾ ತಿಳಿಯುವ ಅವಕಾಶ ವಿಶ್ವ ಏಡ್ಸ್ ದಿನವಾಗಿದೆ.

ಪ್ರತಿ ವರ್ಷ ಈ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ವರ್ಷ ಎಚ್.ಐ.ವಿ / ಏಡ್ಸ್ ಸೋಂಕಿತರಿಗೆ ಅಗತ್ಯವಾದ ಸೇವೆಗಳು ಹಾಗೂ ಸೌಲಭ್ಯಗಳನ್ನು ಸೂಕ್ತವಾಗಿ ಒದಗಿಸುವ ಸೋಂಕಿತರಿಗೆ ಕಳಂಕ ಹಾಗೂ ತಾರತಮ್ಯದ ವಿರುದ್ಧ ರಕ್ಷಣೆಕೊಡಬಹುದಾದ ಎಚ್.ಐ.ವಿ/ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾಯ್ದೆ ೨೦೧೭ರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ.

ಜಾಗೃತಿ ಜಾಥಾ

ವಿಶ್ವ ಏಡ್ಸ ದಿನಾಚರಣೆ ಅಂಗವಾಗಿ ಡಿ.೧ ರಂದು ಬೆಳಗ್ಗೆ ೯.೩೦ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಎಲ್.ಐ.ಸಿ ಸರ್ಕಲ್ ವರೆಗೆ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ೧೧ಕ್ಕೆ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net