ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ

Published on

ಪುತ್ತೂರು ಗ್ರಾಮಾಂತರ: ಮೂರು ಮಂದಿಯನ್ನೊಳಗೊಂಡ ತಂಡ ವ್ಯಕ್ತಿಯೊಬ್ಬರ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಚಾವಡಿ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ರಘುನಾಥ್ ರೈ ಹಲ್ಲೆಗೊಳಗಾದವರು. ಸಂಬಂಧಿಕರಾದ ಸುದೀನ್ ಮತ್ತು ಆತನ ಸ್ನೇಹಿತರಾದ ನಿಶಾಂತ್ ಹಾಗೂ ವಿಜಿತ್ ಎಂಬವರು ಸೇರಿಕೊಂಡು ರಘುನಾಥ ರೈ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಿಂಗಳಾಡಿಗೆ ಬಂದು, ತಿಂಗಳಾಡಿ ಜಂಕ್ಷನ್‌ನಲ್ಲಿರುವ ಗೂಡಂಗಡಿಯೊಂದರ ಬಳಿ ನಿಂತುಕೊಂಡಿದ್ದ ರಘುನಾಥ ರೈ ಅವರಲ್ಲಿ ಸಂಬಂಧಿಕ ಸುದೀನ್ ಹಾಗೂ ಆತನ ಸ್ನೇಹಿತರಾದ ನಿಶಾಂತ್ ಮತ್ತು ವಿಜೇತ್ ಸೇರಿಕೊಂಡು ತಗಾದೆ ಎತ್ತಿ ಅವರ ತಲೆಯನ್ನು ಅಂಗಡಿಯ ಗೋಡೆಗೆ ಜಜ್ಜಿ ಹಲ್ಲೆ ನಡೆಸಿದ್ದಾರೆ.

ತಲೆಯ ಭಾಗಕ್ಕೆ ಗಾಯಗಳಾಗಿರುವ ರಘುನಾಥ ರೈ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಆಸ್ತಿ ವಿವಾದದ ಹಿನ್ನಲೆಯಲ್ಲಿ ಈ ಹಲ್ಲೆ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net