

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದ್ದು, ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬನ ಪರಿಸ್ಥಿತಿ ಚಿಂತಾಜನಕವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಲಾವತ್ತಡ್ಕ ಎಂಬಲ್ಲಿ ಈ ಅವಘಡ ಸಂಭವಿಸಿದೆ.
ಗುಂಡ್ಯದಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ ಗುದ್ದಿದ್ದರೂ ಚಾಲಕ ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಅಪಘಾತದಲ್ಲಿ ಬೈಕ್ ಸವಾರ ಸಕಲೇಶಪುರದ ಅರುಣ್ ಸಾವಿಗೀಡಾಗಿದ್ದರೆ, ಸಹ ಸವಾರ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಚಾಲಕ ಬಸ್ಸನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದರೂ ಪೊಲೀಸರು ಅದನ್ನು ಚೇಸ್ ಮಾಡಿಕೊಂಡು ಹೋಗಿ ಗುಂಡ್ಯ ಬಳಿ ವಶಕ್ಕೆ ಪಡೆದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೂಕ್ತ ಕ್ರಮ ಜರುಗಿಸಿದ್ದಾರೆ.