ಐತಿಹಾಸಿಕ ತಾಣ ಗುಡೇಕೋಟೆಯಲ್ಲಿಲ್ಲ ಬಸ್ ನಿಲ್ದಾಣ:ವಿದ್ಯಾರ್ಥಿಗಳು, ಸ್ಥಳೀಯರಿಗೆ ತೊಂದರೆ

Untitled design
ಗುಡೇಕೋಟೆಯಲ್ಲಿ ಬಸ್ ಪ್ರಯಾಣಿಕರ ತಂಗುದಾಣದ ದುಸ್ಥಿತಿ.
Published on

ಕೂಡ್ಲಿಗಿ: ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಗುಡೇಕೋಟೆ ಒನಕೆ ಓಬವ್ವ ಅವರ ತವರೂರು. ಅಲ್ಲದೆ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಕರಡಿಧಾಮ ಹೊಂದಿರುವ ಸ್ಥಳವಾಗಿದ್ದು, ಐತಿಹಾಸಿಕ ಪ್ರವಾಸಿ ತಾಣವಾಗಿಯೂ ಗಮನ ಸೆಳೆದಿದೆ. ಆದರೆ, ವರ್ಷಗಳೇ ಉರುಳಿದರೂ ಸುಸಜ್ಜಿತ ಬಸ್ ನಿಲ್ದಾಣ ಕಂಡಿಲ್ಲ. ಇದರಿಂದ ಪ್ರವಾಸಿಗರು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ.


ಪಕ್ಕದ ಆಂಧ್ರದ ರಾಯದುರ್ಗ ಮತ್ತು ಬಳ್ಳಾರಿಗೆ ತೆರಳುವ ಪ್ರಮುಖ ಹೆದ್ದಾರಿಯೂ ಗುಡೇಕೋಟೆಯಿಂದ ಹಾದು ಹೋಗಿದೆ. ಚಿತ್ರದುರ್ಗ ಮತ್ತು ವಿಜಯನಗರಕ್ಕೆ ಈ ರಾಜ್ಯ ಹೆದ್ದಾರಿಯಿಂದ ಹೋಗಬೇಕು. ಆದರೆ, ಸೂಕ್ತ ಬಸ್ ನಿಲ್ದಾಣ ಇಲ್ಲವಾಗಿದೆ. ಈಗಿರುವ ಬಸ್ ಪ್ರಯಾಣಿಕರ ತಂಗುದಾಣವೂ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತದೆ. ಇಲ್ಲಿನ ಐಟಿಐ ಕಾಲೇಜ್, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಪೂ ಕಾಲೇಜಿಗೆ ಬರುವ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು, ಸಂತೆಗೆ ಆಗಮಿಸುವ ಜನರು, ವ್ಯಾಪಾರಿಗಳು ಭಯದಲ್ಲೇ ನಿಲ್ಲಬೇಕಿದೆ.


ಗುಡೇಕೋಟೆ ಬಸ್ ನಿಲ್ಲುವ ಸ್ಥಳದಲ್ಲಿ ಸದಾ ಜನದಟ್ಟಣೆ ಇರುತ್ತದೆ. ಬಸ್ ಹತ್ತಲು ಯಾವ ಸ್ಥಳದಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಮೂಡುತ್ತದೆ. ರಸ್ತೆ ಪಕ್ಕದ ಅಂಗಡಿಗಳ ಮುಂದೆ ಬಳಿ ಬಸ್‌ಗಾಗಿ ಕಾಯುತ್ತ ನಿಲ್ಲಬೇಕಾಗಿದೆ. ಇದು ಯುವತಿಯರು, ವಿದ್ಯಾರ್ಥಿನಿಯರು ಮುಜುಗರ ಅನುಭವಿಸುವಂತಾಗಿದೆ. ಭಾನುವಾರ ನಡೆಯುವ ಸಂತೆ ದಿನ ಅಲ್ಲಿಯೇ ವ್ಯಾಪಾರ, ವಹಿವಾಟು ನಡೆಯುವ ಕಾರಣ ವೃದ್ಧರು, ಮಹಿಳೆಯರು, ಮಕ್ಕಳು ಪರದಾಡುವಂತಾಗುತ್ತದೆ. ಬಸ್ ನಿಲ್ದಾಣ ಇಲ್ಲದ ಕಾರಣ, ಬಸ್, ತಳ್ಳುವ ಗಾಡಿಗಳ ನಿಲುಗಡೆ, ಸಂತೆಯೂ ಒಂದೆಡೆ ನಡೆಯುವುದರಿಂದ ಪ್ರತಿವಾರ ಜನಜಂಗುಳಿಯಿಂದ ಜಾತ್ರೆಯಂತೆ ಭಾಸವಾಗುತ್ತದೆ. ಈ ವೇಳೆ ಬಸ್ ಇಳಿಯುವಾಗ, ಏರುವಾಗ ಪ್ರಯಾಣಿಕರು ಕೆಳಗೆ ಬಿದ್ದ ಉದಾಹರಣೆಗಳಿವೆ. ರಸ್ತೆ ಅಪಘಾತಗಳು ನಡೆದು ಗಾಯಗೊಂಡ ಘಟನೆಗಳು ನಡೆದಿವೆ.


ಗ್ರಾಮದಲ್ಲಿ ರೈತಸಂಪರ್ಕ ಕೇಂದ್ರ, ಪೊಲೀಸ್ ಠಾಣೆ, ನಾಡಕಚೇರಿ,ಅಂಚೆ ಕಚೇರಿ, ವಲಯ ಅರಣ್ಯ ಇಲಾಖೆ ಕೂಡ ಇದ್ದು, ಗುಡೇಕೋಟೆಗೆ ಪ್ರತಿದಿನ ಬಂದು ಹೋಗುವವರ ಸಂಖ್ಯೆ ಹೆಚ್ಚಿದ್ದು, ಸುಸಜ್ಜಿತ ಬಸ್ ನಿಲ್ದಾಣ ಆರಂಭಿಸಬೇಕು. ಈ ಬಗ್ಗೆ ಗ್ರಾಪಂ ಹಾಗೂ ಇತ್ತೀಚೆಗೆ ಆರಂಭಿಸಿರುವ ನಾಡಕಚೇರಿ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಡೇಕೋಟೆಯಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಗ್ರಾಪಂ ಅಧಿಕಾರಿಗಳೊಂದಿಗೆ ಸ್ಥಳ ಹುಡುಕಾಟ ನನಡೆಸಲಾಗುವುದು. ಈ ಕುರಿತು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ಗಮನಕ್ಕೂ ತಂದು, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.ಕೆ.ಚಂದ್ರಶೇಖರ,ಉಪ ತಹಸೀಲ್ದಾರ್, ಗುಡೇಕೋಟೆ ಗುಡೇಕೋಟೆಯಲ್ಲಿ ಸದ್ಯಕ್ಕೆ ಇರುವ ಬಸ್ ಪ್ರಯಾಣಿಕರ ತಂಗುದಾಣ ದುರಸ್ತಿಗೊಳಿಸಬೇಕು. ಬಸ್ ನಿಲ್ದಾಣ ನಿರ್ಮಿಸಿದರೆ ಪ್ರವಾಸಿಗರು ಮತ್ತು ಸುತ್ತಲಿನ ಗ್ರಾಮಗಳ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ.ಮೊಬೈಲ್ ಮಂಜುನಾಥ್, ಸ್ಥಳೀಯ ನಿವಾಸಿ, ಗುಡೇಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net