ಏ.6ರಿಂದ ಐತಿಹಾಸಿಕ ಕೋಟೆ ರಾಮೋತ್ಸವ; 87ನೇ ಗ್ಲೋಬಲ್ ಮ್ಯೂಸಿಕ್ ಫೆಸ್ಟ್

kote
Published on

ಬೆಂಗಳೂರು: ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ ಶ್ರೀರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಆಯೋಜಿಸುವ ಐತಿಹಾಸಿಕ ಕೋಟೆ ರಾಮೋತ್ಸವವು ಏ.6ರಿಂದ ಮೇ.2ರವರೆಗೆ ನಡೆಯಲಿದೆ. ಚಾಮರಾಜಪೇಟೆ ಕೋಟೆ ಶಾಲೆ ಮೈದಾನದಲ್ಲಿ ನಡೆಯಲಿರುವ 87ನೇ ಗ್ಲೋಬಲ್ ಮ್ಯೂಸಿಕ್ ಪೆಸ್ಟಿವಲ್‌ನಲ್ಲಿ ದೇಶದ ಅನೇಕ ಖ್ಯಾತನಾಮ ಸಂಗೀತಗಾರರು ಪಾಲ್ಗೊಂಡು ಪ್ರದರ್ಶನ ನೀಡಲಿದ್ದಾರೆ. ಬೆಂಗಳೂರಿನ ಸಾಂಸ್ಕೃತಿಕ ಉತ್ಸವಗಳಲ್ಲೇ ವಿಶಿಷ್ಟ ಸ್ಥಾನ ಹಾಗೂ ಪ್ರಸಿದ್ಧಿ ಪಡೆದಿರುವ ಕೋಟೆ ರಾಮೋತ್ಸವವು ದೇಶ-ವಿದೇಶಗಳ ಸಂಗೀತ ಪ್ರೇಮಿಗಳ ಮೆಚ್ಚಿನ ಕಾರ್ಯಕ್ರಮವಾಗಿದೆ. ನಾದಸ್ವರ, ತಬಲಾ ವಾದನ, ಕೊಳಲು, ವೀಣೆ, ವಯಾಲಿನ್, ಪಿಟೀಲು, ಹಾರ್ಮೋನಿಯಂ, ಮೃದಂಗ, ಸಾರಂಗ ಇತ್ಯಾದಿ ಅಪರೂಪದ ಸಂಗೀತ ವಾದನಗಳ ಜೊತೆಗೆ ಕರ್ನಾಟಿಕ್ ಸಂಗೀತ, ಹಿಂದೂಸ್ಥಾನಿ ಸಂಗೀತ, ದಾಸರಪದ, ಭಜನ್ ಇತ್ಯಾದಿ ಸಂಗೀತದ ಸುಧೆ ಒಂದು ತಿಂಗಳ ಕಾಲ ನಿರಂತರವಾಗಿ ಹರಿಯಲಿದೆ. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರುಗಳಿಗೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಕೋಟೆ ರಾಮೋತ್ಸವದ ಅಂಗವಾಗಿ ಸೀತಾ ಸಮೇತ ಶ್ರೀರಾಮ ದೇವರಿಗೆ ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ಜೊತೆಗೆ ಪ್ರತಿದಿನ ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಇರುತ್ತದೆ.

ಡಾ.ವಿದ್ಯಾಭೂಷಣರಿಗೆ ಗ್ಲೋಬಲ್ ಅವಾರ್ಡ್​

ಶ್ರೀರಾಮ ಸೇವಾ ಮಂಡಳಿಯನ್ನು ಸಂಸ್ಥಾಪಿಸಿ, ವಿಶಿಷ್ಟ ಸಂಗೀತ ಲೋಕವನ್ನೇ ಅನಾವಣರ ಮಾಡಲು ಮುನ್ನುಡಿ ಬರೆದ ಎಸ್.ವಿ.ನಾರಾಯಣಸ್ವಾಮಿ ರಾವ್ ಅವರ ಹೆಸರಿನಲ್ಲಿ ಕೊಡ ಮಾಡುವ ಗ್ಲೋಬಲ್ ಅವಾರ್ಡ್ 2025ಕ್ಕೆ ಪ್ರಖ್ಯಾತ ಗಾಯಕ ಡಾ.ವಿದ್ಯಾಭೂಷಣ ಆಯ್ಕೆಯಾಗಿದ್ದಾರೆ. ಡಾ.ವಿದ್ಯಾಭೂಷಣರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಏ.13ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಂಸ್ಥಾಪಕರ ದಿನಾಚರಣೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅಯೋಜಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net