

ಹರಪನಹಳ್ಳಿ: ಪಟ್ಟಣ ಹೊರವಲಯದಲ್ಲಿರುವ ದೇವರತಿಮ್ಲಾಪುರದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಬಳಿ ಇರುವ ಐತಿಹಾಸಿಕ ಮಜ್ಜನಬಾವಿ (ಪುಷ್ಕರಣಿ)ಯ ಕಲ್ಲಿನಗೋಡೆ ಕಳೆದ ವರ್ಷ ಸುರಿದ ಮಳೆಗೆ ಕುಸಿದಿದ್ದು, ಅಂದ ಕಳೆದುಕೊಂಡಿದೆ. ದುರಸ್ತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಮಜ್ಜನಬಾವಿ ಪುರಾತನ ಕಾಲದ ಪುಷ್ಕರಣಿಯಾಗಿದ್ದು, ಚೌಕಕಾರದ ಮಾದರಿಯ ಬಾವಿ ಮುಂಭಾಗದಲ್ಲಿ ಶಾಸನವಿದೆ. ಹರಪನಹಳ್ಳಿ ಹಿರೇಕೆರೆ ತುಂಬಿದರೆ ಈ ಬಾವಿಯಲ್ಲಿ ನೀರು ತುಂಬಿರುತ್ತದೆ. ಇದು ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದು, ಬಾವಿಯ ನೀರನ್ನು ದೇವರ ಕಾರ್ಯಗಳಿಗೆ, ಮದುವೆ, ಸಮಾರಂಭಗಳಿಗೆ ಬಳಸುತ್ತಿದ್ದರು. ಹಿಂದೆ ಈ ಬಾವಿ ಬಿದ್ದಾಗ ಗ್ರಾಮಸ್ಥರನ್ನು ಒಳಗೊಂಡಿರುವ ದೈವಸ್ಥರ ಸಮಿತಿಯಿಂದ ಮತ್ತೆ ನಿರ್ಮಾಣ ಮಾಡಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳು ಬಾವಿಯನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಕೈಗೊಂಡಿದ್ದರು. ಬಳಿಕ ನೀರಿನಿಂದ ಭರ್ತಿಗೊಂಡು ಸುಂದರವಾಗಿ ಕಂಗೊಳಿಸುತ್ತಿತ್ತು. ಕಳೆದ ವರ್ಷ ಭಾರಿ ಮಳೆಗೆ ಬಾವಿಯ ರಕ್ಷಣಾ ಗೋಡೆ ಕುಸಿದಿದ್ದು, ನರೇಗಾ ಯೋಜನೆಯಡಿ ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜನರ ಒತ್ತಾಯಿಸಿದ್ದಾರೆ.
ಪುರಾತನ ಕಾಲದ ಬಾವಿಗೆ ಮಜ್ಜನಬಾವಿ, ತಿಮ್ಮಪ್ಪನ ಬಾವಿ ಎನ್ನುತ್ತಾರೆ. ಈ ನೀರಿನಿಂದ ಯಾವುದೇ ರೋಗಗಳು ಬರುತ್ತಿರಲಿಲ್ಲ. ಬಾವಿಯ ಗೊಡೆ ಬಿದ್ದಿದ್ದು , ಸಂಬಂಧಿಸಿದ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು.ಎಂ.ಡಿ.ತಿಮ್ಮಪ್ಪ,ದೇವರತಿಮ್ಲಾಪುರ ಗ್ರಾಮಸ್ಥ ಪುರಾತನ ಪುಷ್ಕರಣಿ ಗೋಡೆ ಕುಸಿದಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸಿ ಸಲ್ಲಿಸಲಾಗುವುದು. ಅನುದಾನ ಬಂದಲ್ಲಿ ದುರಸ್ತಿ ಮಾಡಲಾಗುವುದು. ಇಲ್ಲವೆ ಮುಜರಾಯಿ ಇಲಾಖೆ ಅಥವಾ ಇತರ ಅನುದಾನ ಬಂದಲ್ಲಿ ಮರು ನಿರ್ಮಾಣ ಮಾಡಲಾಗುವುದು. ಸದ್ಯಕ್ಕೆ ಕುಸಿದ ಮಣ್ಣು ತೆರವಿಗೆ ಕ್ರಮವಹಿಸಲಾಗುವುದು.ಶಿವಕುಮಾರ ಬಿರಾದಾರ,ತಹಸೀಲ್ದಾರ್, ಹರಪನಹಳ್ಳಿ