ಸಿನಿಮಾ

ಕುಣಿಗಲ್ ಐತಿಹಾಸಿಕ ಶಿಲಾಶಾಸನ ಹರಪನಹಳ್ಳಿ ತಾಲೂಕಿನಲ್ಲಿ ಪತ್ತೆ

ತುಮಕೂರು: ಕುಣಿಗಲ್ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಮುಖ ಶಿಲಾಶಾಸನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾಗಿದೆ.

ಹರಪನಹಳ್ಳಿಯ ಅರಸಿಕೆರೆ ಏರಿ ಸಮೀಪದ ಈಶ್ವರದೇವಾಲಯದಲ್ಲಿ ಶಾಸನ ದೊರೆತಿದ್ದು, ತುಮಕೂರು ಜಿಲ್ಲೆಯ ಕುಣಿಗಲ್‌ಗೆ ಸಂಬಂಧಿಸಿದ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದೆ.

ತುಮಕೂರು ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್ ಹಾಗೂ ದಾವಣಗೆರೆ ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಜೆ.ಸುಧಾ ಅವರ ಸಂಶೋಧನೆಯಿಂದ ಈ ಶಾಸನದ ವಿವರಗಳು ಬೆಳಕಿಗೆ ಬಂದಿವೆ.

ಹರಪನಹಳ್ಳಿ ವ್ಯಾಪ್ತಿಯ ಅರಸಿಕೆರೆಯಲ್ಲಿ ಶಾಸನವು ಹಲವಾರು ವರ್ಷಗಳಿಂದ ಹೂತು ಹೋಗಿತ್ತು. ಹೂಳೆತ್ತುವ ಸಂದರ್ಭದಲ್ಲಿ ಪತ್ತೆಯಾದ ಈ ಶಾಸನವನ್ನು ಸ್ಥಳೀಯರು ಸ್ವಚ್ಛಗೊಳಿಸಿ ಸಮೀಪದ ಈಶ್ವರ ದೇವಾಲಯದಲ್ಲಿ ಸ್ಥಾಪಿಸಿದ್ದಾರೆ.

ಪತ್ತೆಯಾಗಿರುವ ಈ ಶಾಸನ 11ನೇ ಶತಮಾನಕ್ಕೆ ಸಂಬಂಧಿಸಿದ ಅಪ್ರಕಟಿತ ಶಿಲಾಶಾಸನವಾಗಿದ್ದು, ಕಲ್ಯಾಣ ಚಾಳುಕ್ಯರ 6ನೇ ವಿಕ್ರಮಾದಿತ್ಯನ ಕಾಲದ್ದಾಗಿದ್ದು, ಆ ಕಾಲದ ಶಾಸನಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಶಾಸನವು ಕಪ್ಪುಮಿಶ್ರಿತ ನೀಲಿ ಛಾಯೆಯ ಲಿಪಿಯಲ್ಲಿ ಒಟ್ಟು 28 ಸಾಲುಗಳನ್ನು ಒಳಗೊಂಡಿದೆ. ಇದು 1099ರಲ್ಲಿ ರಚನೆಯಾಗಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ.

ಪ್ರಮುಖ ವಿದ್ಯಾಕೇಂದ್ರವಾಗಿದ್ದ ಕುಣಿಂಗಿಲು: 11ನೇ ಶತಮಾನದಲ್ಲಿ 6ನೇ ವಿಕ್ರಮಾದಿತ್ಯನ ಸಾಮಂತ ರಾಜನಾಗಿ ಕುಣಿಂಗಿಲು(ಕುಣಿಗಲ್)ನಲ್ಲಿ ಆಳ್ವಿಕೆ ಮಾಡುತ್ತಿದ್ದ ಜಕ್ಕಿಸೆಟ್ಟಿ ವಿದ್ಯಾಸ್ನೇಹಿಯಾಗಿದ್ದ ಎಂಬುದು ಈ ಅಪ್ರಕಟಿತ ಶಾಸನದಿಂದ ಗೋಚರವಾಗಿದೆ. ಅಂದಿನ ಕಾಲದಲ್ಲಿಯೇ ಆಳ್ವಿಕೆ ಮಾಡುತ್ತಿದ್ದ ರಾಜ ವಿದ್ಯಾಕೇಂದ್ರವನ್ನು ಸ್ಥಾಪಿಸಲು ಭೂಮಿಯನ್ನು ದಾನವಾಗಿ ನೀಡಿರುವುದು ಇತಿಹಾಸದಲ್ಲಿ ಪ್ರಮುಖವಾಗಿ ಅಂಶವಾಗಿದ್ದು ಸಾಹಿತ್ಯ, ಕಲೆ, ಶಿಕ್ಷಣಕ್ಕೆ ಚಾಲುಕ್ಯರು ನೀಡಿದ ಕೊಡುಗೆಗೆ ಕುಣಿಗಲ್ ಕೂಡ ಸೇವೆ ಸಲ್ಲಿಸಿದೆ ಎಂಬಂತಾಗಿದೆ.

ಶಾಸನದಲ್ಲಿ ಕುಣಿಗಲ್ ಬಗ್ಗೆ ಉಲ್ಲೇಖ!

11ನೇ ಶತಮಾನದಲ್ಲಿಯೇ ತುಮಕೂರು ಜಿಲ್ಲೆಯ ಕುಣಿಗಲ್ ಕುಣಿಂಗಿಲು ನಾಡೆಂದು ಪ್ರಸಿದ್ಧಿ ಹೊಂದಿರುವುದು, ಚಾಳುಕ್ಯ 6ನೇ ವಿಕ್ರಮಾದಿತ್ಯನ ಆಳ್ವಿಕೆ ಕುಣಿಂಗಿಲು ನಾಡವರೆಗೂ ಹಬ್ಬಿರುವುದು ಈ ಶಾಸನದಿಂದ ತಿಳಿದುಬಂದಿದೆ.
ಶಾಸನದಲ್ಲಿರುವ ಲಭ್ಯವಾಗಿರುವ ಮಾಹಿತಿಯಂತೆ ಆಗ ಕುಣಿಂಗಿಲು ನಾಡನ್ನು ಜಕ್ಕಿಸೆಟ್ಟಿ ಎಂಬಾತನು ಆಳುತ್ತಿದ್ದನು. ಶಾಸನದ ಕಲ್ಲು ಸುಮಾರು 5 ಅಡಿ ಎತ್ತರ ಹಾಗೂ 3 ಅಡಿ ಅಗಲವಿದ್ದು, ಶಾಸನದ ಮೇಲ್ಬಾಗದ ಪಟ್ಟಿಕೆಯಲ್ಲಿ 52 ವರ್ಷಕ್ಕಿಂತಲೂ ಹೆಚ್ಚು ಕಾಲ ಗುರುಸ್ಥಾನವನ್ನು ಅಲಂಕರಿಸಿದ ವರೇಶ್ವರ ಪಂಡಿತರು ಶಿವಲಿಂಗಕ್ಕೆ ಕೈಮುಗಿದು ನಿಂತಿರುವಂತಹ ಚಿತ್ರವಿದೆ.
ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ವರೇಶ್ವರ ಪಂಡಿತ ಚಾಲುಕ್ಯರ ಆಳ್ವಿಕೆಯ ಸ್ಥಳಗಳಲ್ಲಿ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದ ಬಗ್ಗೆ ಈಗಾಗಲೇ ಲಭ್ಯವಿರುವ 400 ಶಾಸನಗಳಲ್ಲಿ ತಿಳಿದುಬಂದಿದೆ. ಈಗ ಲಭ್ಯವಾಗಿರುವ 401ನೇ ಶಾಸನದಲ್ಲಿ ಕುಣಿಗಲ್‌ನಲ್ಲಿಯೂ ವರೇಶ್ವರ ಪಂಡಿತನಿಗೆ ವಿದ್ಯಾಕೇಂದ್ರ ಸ್ಥಾಪಿಸಲು ಜಕ್ಕಿಸೆಟ್ಟಿ ಭೂಮಿಯನ್ನು ದಾನ ನೀಡಿರುವ ಬಗ್ಗೆ ತಿಳಿದುಬಂದಿದೆ.

ಹರಪನಹಳ್ಳಿಯಲ್ಲಿ ಪತ್ತೆಯಾದ ಅಪ್ರಕಟಿತ ಶಿಲಾಶಾಸನದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಬಗ್ಗೆ ಉಲ್ಲೇಖವಿದೆ. ವಿಕ್ರಮಾದಿತ್ಯನ ಕಾಲದಲ್ಲಿ ಕುಣಿಂಗಿಲು(ಕುಣಿಗಲ್)ನಲ್ಲಿ ಆಳ್ವಿಕೆ ಮಾಡುತ್ತಿದ್ದ ಜಕ್ಕಿಸೆಟ್ಟಿ ವಿದ್ಯಾಸ್ನೇಹಿಯಾಗಿದ್ದ ಎಂಬುದು ಶಾಸನದಿಂದ ಗೋಚರವಾಗಿದೆ. | ಪ್ರೊ.ಕೊಟ್ರೇಶ್ ಇತಿಹಾಸ ಪ್ರಾಧ್ಯಾಪಕ, ತುಮಕೂರು ವಿವಿ

Latest Posts

ಲೈಫ್‌ಸ್ಟೈಲ್