ಕರೊನಾ ಗೆದ್ದ 96 ವರ್ಷದ ಅಜ್ಜಿ: ಆಸ್ಪತ್ರೆ ಅನ್ನ ಸ್ವಲ್ಪ ಗಟ್ಟಿ ಎಂದ ಮಗ

corona-ajji
Published on

ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 97 ವರ್ಷಗಳ ವೃದ್ಧೆ ಗೋವಿಂದಮ್ಮ ಅವರು ಕರೊನಾ ವೈರಸ್‌ ಗೆದ್ದು ಬಂದಿದ್ದಾರೆ.

ಕೆಲವು ದಿನಗಳ ಹಿಂದೆ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಇವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಸಂಪೂರ್ಣ ಗುಣಮುಖರಾಗಿ ಬಂದಿದ್ದಾರೆ. ಈ ಮೂಲಕ, ಕರೊನಾ ಮಾರಿಯನ್ನು ಜಯಿಸಿ ಬಂದ ಕರ್ನಾಟಕದ ಎರಡನೆಯ ಅತ್ಯಂತ ಹಿರಿಯರು ಎಂಬ ಬಿರುದಿಗೂ ಇವರು ಪಾತ್ರರಾಗಿದ್ದಾರೆ.

ಈ ಕುರಿತು ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಕೃಷ್ಣಪ್ಪ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ವೃದ್ಧೆಯೊಬ್ಬರು ಕರೊನಾದಿಂದ ಗುಣಮುಖರಾಗಿ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವೃದ್ಧೆ ಹಾಗೂ ಅವರ ಮಗನನನ್ನು ದೂರವಾಣಿ ಮುಖಾಂತರ ಸಚಿವೆ ಮಾತನಾಡಿಸಿದ್ದಾರೆ. ತಮ್ಮ ತಾಯಿ ಈ ಮಹಾಮಾರಿಯನ್ನು ಗೆದ್ದು ಬಂದಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿರುವ ಮಗ, ‘ಒಂದೇ ಒಂದು ರಿಕ್ವೆಸ್ಟ್‌ ಮೇಡಂ, ಆಸ್ಪತ್ರೆ ತುಂಬಾ ಸೂಪರ್‌, ಅಲ್ಲಿಯ ಟ್ರೀಟ್‌ಮೆಂಟ್‌ ಕೂಡ ತುಂಬಾ ಚೆನ್ನಾಗಿದೆ. ಆದರೆ ಅಲ್ಲಿಯ ಅನ್ನ ತುಂಬಾ ಗಟ್ಟಿಯಾಗಿದ್ದು, ತಿನ್ನಲು ಕಷ್ಟವಾಗುತ್ತದೆ. ದಯವಿಟ್ಟು ಈ ಬಗ್ಗೆ ತಾವು ಆಸ್ಪತ್ರೆಯ ಗಮನಕ್ಕೆ ತರಬೇಕು’ ಎಂದಿದ್ದಾರೆ.

ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕಿ ಭರವಸೆ ನೀಡಿದ್ದಾರೆ. ಈ ವಿಡಿಯೋವನ್ನು ಕೂಡ ಪೂರ್ಣಿಮಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net