

ಬೆಳ್ತಂಗಡಿ: ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೆ ಹಿಂದುಗಳು ಕೈ ಜೋಡಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗವೀರ ಹೇಳಿದರು.
ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾಣಿಕ ಬ್ರಾಹ್ಮಣ ಸಭಾಭವನದಲ್ಲಿ ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದು ಜನಜಾಗೃತಿ ಸಮಿತಿ ಆಯೋಜನೆಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಂದಿರ ಅಧಿವೇಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸನಾತನ ಸಂಸ್ಥೆ ಧರ್ಮಪ್ರಸಾರಕ ರಮಾನಂದ ಗೌಡ ಮಾತನಾಡಿ, ಇಂದು ಮತಾಂತರ, ದೇವತೆಗಳ ಅಪಮಾನ, ಹಿಂದುಗಳಲ್ಲಿ ಸ್ವಾಭಿಮಾನ ಕೊರತೆ, ಹೀಗೆ ಅನೇಕ ಸಂಕಟ ಎದುರಿಸುತ್ತಿದ್ದೇವೆ ಎಂದರು.
ನಾರಾಯಣ ಫಡ್ಕೆ ಮಾತನಾಡಿ, ಬೆಂಗಳೂರಿನ ರಾಜ್ಯ ಮಂದಿರ ಅಧಿವೇಶನದ ಪ್ರೇರಣೆಯಿಂದ ಇಂದು ತಾಲೂಕು ಮಟ್ಟದ ಅಧಿವೇಶನವನ್ನು ಏರ್ಪಡಿಸಲು ಸಾಧ್ಯವಾಗಿದೆ ಎಂದರು.
ಅನಂತೇಶ್ವರ ದೇವಸ್ಥಾನ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀನಿವಾಸ ಗೌಡ, ಮಾತನಾಡಿ ದೇವಸ್ಥಾನದ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವುದು ದೇವಸ್ಥಾನ ಆಡಳಿತದ ಕರ್ತವ್ಯವಾಗಿದೆ. ದೇವಸ್ಥಾನದ ಸ್ವಚ್ಛತೆ ಕಾರ್ಯದಲ್ಲಿ ಸುತ್ತಮುತ್ತಲಿನ ಭಕ್ತಾದಿಗಳು ಸೇರಬೇಕು ಎಂದರು.