

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವವು ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾನುವಾರ ಶ್ರೀ ದೇವರಿಗೆ ಸಹಸ್ರಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನೆರವೇರಲಿದೆ.
ಬೆಳಗ್ಗೆ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಶ್ರೀ ದೇವರ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೆಕ, ಪ್ರತಿಷ್ಠಾಪನಾ ಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಶಿವಶಂಕರ ಭಟ್ ಪಳ್ಳತ್ತಡ್ಕ, ವಾಸ್ತುತಜ್ಞ ಕೆ.ಎನ್.ಭಟ್ ಬೆಳ್ಳಿಗೆ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿರುವರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಾರ್ಪಣಮ್ ನಟರಾಜ ವೇದಿಕೆಯಲ್ಲಿ ಪೂರ್ವಾಹ್ನ 9ರಿಂದ ಸಪ್ತಸ್ವರ ಸಂಗೀತ ಶಾಲೆ ಪುತ್ತೂರು ಅವರಿಂದ ಭಕ್ತಿಸಂಗೀತ, 10.30ರಿಂದ ಸಾಮೂಹಿಕ ರುದ್ರ ಪಾರಾಯಣ ಸೇವೆ, ಸಂಜೆ 4ರಿಂದ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಬಯಲಾಟ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿಗಳಿಂದ ನಡೆಯಲಿದೆ.
ಶನಿವಾರ ಬೆಳಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಪೂಜೆ, ಅವಾಸ ಹೋಮದ ಅಗ್ನಿಜನನ, ತತ್ವಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರ ಪೂಜೆ, ಮಹಾಪೂಜೆ ನಡೆಯಿತು.