ಹಿಂದು ಸಮಾಜಕ್ಕಿದೆ ಸವಾಲು ಎದುರಿಸುವ ಶಕ್ತಿ

13skpp2 vhp
ಸಕಲೇಶಪುರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ತಾಲೂಕು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಗುರುವಾರ ಸಂಜೆ ಬೃಹತ್ ದತ್ತ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿದರು.
Published on

 ಸಕಲೇಶಪುರ: ಹಿಂದು ಸಮಾಜ ಈ ಹಿಂದಿಗಿಂತಲೂ ಜಾಗೃತವಾಗಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಎಲ್ಲ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಶಕ್ತಿ ಹಿಂದು ಸಮಾಜಕ್ಕಿದೆ ಎಂದು ಪ್ರಾಂತ ಧರ್ಮ ಪ್ರಸಾರ ಪ್ರಮುಖ್ ಸುನೀಲ್ ಕಾರ್ಕಳ ಹೇಳಿದರು.

ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ತಾಲೂಕು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಗುರುವಾರ ಸಂಜೆ ಆಯೋಜಿಸಲಾಗಿದ್ದ ದತ್ತ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದತ್ತಪೀಠದ ಕುರಿತು ಸ್ಕಂದ ಪುರಾಣದಲ್ಲೆ ಉಲ್ಲೇಖವಾಗಿದೆ. ಆದರೆ ಅಲ್ಲಿ ಸುಳ್ಳಿನ ಇತಿಹಾಸ ಸೃಷ್ಟಿ ಮಾಡಿ ಆ ಜಾಗವನ್ನು ಮುಸ್ಲಿಮರು ತಮ್ಮ ವಶಕ್ಕೆ ತೆಗೆದುಕೊಳ್ಳುವ ಪಿತೂರಿ ನಡೆಸಿದರು. ಆದರೆ ಹಿಂದು ಸಂಘಟನೆಗಳ ಹೋರಾಟದಿಂದ ಜಾಗ ಉಳಿದಿದ್ದು ಮುಂದಿನ ದಿನಗಳಲ್ಲಿ ಅಯೋಧ್ಯೆಯಂತೆ ದತ್ತಪೀಠವನ್ನು ಸಂಪೂರ್ಣವಾಗಿ ಹಿಂದುಗಳ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಹಿಂದು ಸಂಘಟನೆಗಳ ಹೋರಾಟದಿಂದ ಅಲ್ಲಿ ಹಿಂದು ಅರ್ಚಕರ ನೇಮಕವಾಗಿದ್ದು, ಇದರಿಂದ ಅಲ್ಲಿ ದೀಪ ಹಚ್ಚಲಾಗುತ್ತಿದೆ. ಹಿಂದುಗಳ ಮೇಲೆ 1500 ವರ್ಷಗಳಿಂದ ಅನ್ಯಮತೀಯರು ದಾಳಿ ಮಾಡಿದರೂ ಸಹ ಹಿಂದುತ್ವವನ್ನು ಅಳಿಸಲು ಸಾಧ್ಯವಾಗಿಲ್ಲ ಎಂದರು.

ತಾಲೂಕಿನ ಚಂಗಡಿಹಳ್ಳಿ ಸಮೀಪದ ಹೆಗ್ಗಡಿಹಳ್ಳಿ ಮಠದ ಷಡ್ಬಾವ ರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಪಂಚದಲ್ಲಿ ಪವಾಡಗಳು ನಡೆಯುವುದು ಭಾರತ ಭೂಮಿಯಲ್ಲಿ ಮಾತ್ರ. 1500 ವರ್ಷಗಳಿಂದ ಹಿಂದು ಧರ್ಮದ ಮೇಲೆ ನಿರಂತರ ದಾಳಿಗಳು ನಡೆದರೂ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಧರ್ಮದ ಉಳಿವು ಮಾತೆಯರ ಮೇಲಿದೆ. ಮಾತೆಯರು ಮಕ್ಕಳಿಗೆ ವಿದೇಶ ಸಂಸ್ಕೃತಿಯನ್ನು ಕಲಿಸದೆ ಧರ್ಮದ ಆಧಾರದಲ್ಲಿ ಸಂಸ್ಕಾರ ಕೊಟ್ಟಲ್ಲಿ ಮಾತ್ರ ಧರ್ಮದ ಉಳಿವು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮೆರವಣಿಗೆ: ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಸಭಾ ಕಾರ್ಯಕ್ರಮದ ವೇದಿಕೆಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿದ್ದು, ನೂರಾರು ಮಂದಿ ಯುವಕರು ವಾದ್ಯವೃಂದಕ್ಕೆ ನರ್ತನ ಮಾಡುತ್ತಾ ಕೇಸರಿ ಧ್ವಜಗಳನ್ನು ಹಿಡಿದು ಸಾಗಿದ್ದು ನೋಡುಗರ ಗಮನ ಸೆಳೆಯಿತು. ಉಪ್ಪಿನಂಗಡಿಯ ಸಹಸ್ರ ಚಂಡೆ ಬಳಗ ಹಾಗೂ ಕುಣಿತಾ ಭಜನಾ ತಂಡದ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸಂತೋಷ್ ಹಾಗೂ ಬಿರಡಹಳ್ಳಿ ರೈಸ್‌ಮಿಲ್ ಮಾಲೀಕ ಕೃಷ್ಣಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ಹರೀಶ್ ಕರಡಿಗಾಲ, ಬಾಲಕೃಷ್ಣ ಬಿರಡಹಳ್ಳಿ, ಲೋಹಿತ್ ಯಡವಾರಹಳ್ಳಿ, ನವೀನ್ ಹೊಸಕೋಟೆ, ವಿಜಯ್‌ಕುಮಾರ್, ಕಿಶೋರ್ ಶೆಟ್ಟಿ, ರವಿತೇಜಾ, ಸುರೇಶ್, ಷಣ್ಮುಖ, ಶ್ರೀಜಿತ್ ಹೆಬ್ಬಸಾಲೆ, ಶಶಿ ನಡೆಹಳ್ಳಿ, ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net