ಹಿಂದು ಮುಕ್ರಿ ಸಮಾಜದ ಸಮುದಾಯ ಭವನದ ಭೂಮಿ ಪೂಜೆ

Raghaveshwar-_Shree
Published on

ಕುಮಟಾ: ಕಷ್ಟದಲ್ಲಿರುವ ಸಮಾಜಕ್ಕೆ ಉಳಿದೆಲ್ಲಾ ಸಮಾಜಗಳು ಬೆಂಬಲ, ಸಹಕಾರ ನೀಡುವ ಮೂಲಕ ಮೇಲಕ್ಕೆತ್ತಬೇಕು. ಸಮುದಾಯಗಳ ನಡುವೆ ಸಾಮರಸ್ಯ ಬೆಳೆಯಬೇಕು. ಮನಸ್ಸುಗಳು ಒಂದಾದಾಗ ಶ್ರೇಷ್ಠವಾದ ಕಾರ್ಯಗಳೂ ಸಿದ್ಧಿಸುತ್ತವೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಪಟ್ಟಣದ ರೈಲುನಿಲ್ದಾಣ ಬಳಿ ಸರ್ಕಾರದ 5 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉತ್ತರ ಕನ್ನಡ ಜಿಲ್ಲಾ ಹಿಂದು ಮುಕ್ರಿ ಸಮಾಜದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ, ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಹಿಂದು ಮುಕ್ರಿ ಸಮಾಜ ಸಂಘಟಿತರಾಗಿ, ಒಂದಾಗಿ ಬೆರೆತಿದೆ. ಇದೇ ರೀತಿ ಸಮುದಾಯದಲ್ಲಿ ಹೃದಯ-ಹೃದಯಗಳು ಬೆಸೆಯಬೇಕು, ಹೆಗಲು-ಹೆಗಲುಗಳು ಸೇರಬೇಕು. ಮನಸ್ಸುಗಳು ಒಂದಾದಾಗ ಮಾತ್ರ ಎಲ್ಲವನ್ನೂ ಸಾಧಿಸಬಹುದು. ಒಂದುಗೂಡುವ ಮನಸ್ಥಿತಿ ಇಲ್ಲದೇ ಹೋದಲ್ಲಿ ಯಾರ ಬೆಂಬಲ, ಯಾರ ಸಹಕಾರ ಇದ್ದರೂ ಯಾವ ಕಾರ್ಯವೂ ಸಫಲವಾಗಲಾರದು. ಒಮ್ಮೆ ನಾವು ಒಂದಾದರೆ ಎಲ್ಲಾ ಕಾರ್ಯವೂ ತಾನಾಗಿಯೇ ನಡೆಯುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ರಾಮಚಂದ್ರಾಪುರ ಮಠವೂ ಸಹ ಮುಕ್ರಿ ಸಮಾಜವನ್ನು ಬಹಳ ಪ್ರೀತಿಯಿಂದಲೇ ಸ್ವೀಕಾರ ಮಾಡಿದ್ದೇವೆ. ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ಜತೆಯಾಗಿ ನಿಲ್ಲುತ್ತೇವೆ. ಯಾವುದೇ ಬೇಧವಿಲ್ಲದೆ ಹಿಂದು ಮುಕ್ರಿ ಸಮಾಜದ ದುಡಿಯುವ ಪ್ರತಿಯೊಬ್ಬ ವ್ಯಕ್ತಿ ದೇಣಿಗೆ ನೀಡಿ ಭವ್ಯ ಸಮುದಾಯ ಭವನ ನಿರ್ಮಾಣದಲ್ಲಿ ಭಾಗಿದಾರನಾಗಬೇಕು. ಅಲ್ಲದೇ ಬೇರೆಲ್ಲ ಸಮಾಜದ ಪ್ರಮುಖರೂ ಸಹ ಕೈ ಜೋಡಿಸಬೇಕು. ಎಲ್ಲಾ ಜನಪ್ರತಿನಿಧಿಗಳೂ ಸಹ ಜಾತಿ, ಬೇಧವನ್ನು ಮರೆತು ಅನುದಾನ ಒದಗಿಸಬೇಕು. ಒಂದು ವರ್ಷದೊಳಗೆ ಕಟ್ಟಡ ಲೋಕಾರ್ಪಣೆಯಾಗುವ ಹಾಗೆ ಪ್ರತಿಯೊಬ್ಬರೂ ಸಹಕಾರ ನೀಡಬೆಕು ಎಂದರು.
ಸಮುದಾಯ ಭವನಕ್ಕಾಗಿ ಸಹಕರಿಸಿದ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಮುಖಂಡ ಕುಮಾರ ಮಾರ್ಕಾಂಡೇಯ ಅವರನ್ನು ಶ್ರೀಗಳು ಗೌರವಿಸಿದರು. ಕಾರ್ಯಕ್ರಮದಲ್ಲಿ ಹಿಂದು ಮುಕ್ರಿ ಸಮಾಜದ 18 ಹಳ್ಳಿಯ ಯಜಮಾನರು, ಸಮಾಜ ಪ್ರಮುಖರು, ಶಿವಾನಂದ ಹೆಗಡೆ ಕಡತೋಕಾ, ರಾಮನಾಥ ಶಾನಭಾಗ, ಗಜಾನನ ಪೈ ಇತರರು ಇದ್ದರು.
ಹಿಂದು ಮುಕ್ರಿ ಸಮಾಜ ಸಂಘದಿAದ ಶ್ರೀಗಳಿಗೆ ಫಲ ಸಮರ್ಪಣೆ ನಡೆಯಿತು. ಸಮುದಾಯ ಭವನ ಸಮಿತಿ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಂಗಾಧರ ದೇವಾಡಿಗ ಮತ್ತು ಸಿಂಚನಾ ದೇವಾಡಿಗ ಅವರ ವಾದ್ಯಗೋಷ್ಠಿ ಗಮನಸೆಳೆಯಿತು. ಆದ್ಯಾ ನಾರಾಯಣ ಮುಕ್ರಿ ಯಕ್ಷಗಾನ ನೃತ್ಯ ಪ್ರದರ್ಶಿಸಿದಳು. ಶಿಕ್ಷಕ ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net