More

    ಗುರುಕುಲಕ್ಕಿದೆ ಪಶ್ಚಿಮದ ಬಿರುಗಾಳಿ ಎದುರಿಸುವ ಶಕ್ತಿ

    ಗೋಕರ್ಣ: ಪಶ್ಚಿಮದ ಬಿರುಗಾಳಿಗೆ ನಮ್ಮ ಸಂಸ್ಕೃತಿ, ಧರ್ಮ ಮತ್ತು ಸಂಸ್ಕಾರಗಳೆಲ್ಲ ಹಾರಿಹೋಗುವ ಅಪಾಯದ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಬಿರುಗಾಳಿಯನ್ನು ಸಮರ್ಥವಾಗಿ ಎದುರಿಸಿ, ನಿರ್ಬಂಧಿಸಿ, ನಮ್ಮತನ ಮತ್ತು ನಮ್ಮ ಸಮಗ್ರ ಭಾರತೀಯತೆಯನ್ನು ಉಳಿಸುವ ಶಕ್ತಿ ನಮ್ಮ ಪಾರಂಪರಿಕ ಗುರುಕುಲ ಶಿಕ್ಷಣಕ್ಕಿದೆ ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

    ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸೇವಾಸೌಧದಲ್ಲಿ ಸಾರ್ವಭೌಮ ಗುರುಕುಲ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಶತಮಾನಮ್’ ವಿಶೇಷ ಪುರಸ್ಕಾರ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಇದಕ್ಕೆ ಕಾರಣರಾದ ಶಿಕ್ಷಕವೃಂದವನ್ನು ಪುರಸ್ಕರಿಸಿ ಅವರು ಆಶೀರ್ವದಿಸಿದರು.

    ಮಕ್ಕಳಿಗೆ ಪ್ರೀತಿ-ಪ್ರೇಮದ ಕಾವಿತ್ತು ತಾಯಿ ಬೆಳೆಸುತ್ತಾಳೆ. ಗುರುವಾದವರು ಜ್ಞಾನದ ಕಾವು ಕೊಟ್ಟು ಬದುಕಿಗೆ ಬೆಳಕನ್ನು ಕರುಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುರುಕುಲಕ್ಕೆ ಶಿಕ್ಷಕರೇ ಕೇಂದ್ರಬಿಂದು. ಇಂತಹ ಗುರುಗಳಿಂದ ಕಳೆದ ಕೆಲ ವರ್ಷದಿಂದ ಗುರುಕುಲ ನೂರಕ್ಕೆ ನೂರು ಸಾಧನೆ ಮಾಡುವಂತಾಗಿದೆ. ಇದೇ ರೀತಿಯಲ್ಲಿ ಗುರುಕುಲದ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನು ಸಾಧಿಸುವಂತಾಗಬೇಕು. ವಿದ್ಯೆ ಮತ್ತು ಸಂಸ್ಕಾರದಲ್ಲಿ ಮಹತ್ತರ ಸಾಧನೆ ಗೈದ ವಿದ್ಯಾರ್ಥಿಗಳಿಗೆ ನಿಃಶುಲ್ಕವಾದ ಉಚಿತ ಶಿಕ್ಷಣ ನೀಡುವ ಗುರಿಯನ್ನು ಗುರುಕುಲ ಹೊಂದಿದೆ ಎಂದರು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ಪ್ರಶಂಸಾಪತ್ರ ಮತ್ತು ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು.

    ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸ್ವಾತಿ, ಸುಮುಖ, ಪ್ರಾಚಾರ್ಯ ನೃಸಿಂಹ ಭಟ್ಟ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸೌಭಾಗ್ಯ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯೆ ಶಶಿಕಲಾ ಕೂರ್ಸೆ, ಶಿಕ್ಷಕರಾದ ಮಂಜುನಾಥ ಶರ್ಮ, ಯಶಸ್ವಿನಿ, ಲೋಹಿತ್ ಹೆಬ್ಬಾರ ಮಾತನಾಡಿದರು. ಬುತ್ತಿಬಳಗ ಆರಂಭಿಸಲಿರುವ ಫಲ ವಿತರಣೆಗೆ ಶ್ರೀಗಳು ಚಾಲನೆ ನೀಡಿದರು. ವಿದ್ಯಾರ್ಥಿಗಳಿಂದ ಗಾಯನ ಮತ್ತು ನರ್ತನ ಪ್ರದರ್ಶನ ನಡೆಯಿತು. ಗುರುಕುಲದ ಗಣೇಶ ಜೋಶಿ ಮತ್ತು ಈಶ್ವರ ಭಟ್ಟ ನಿರ್ವಹಿಸಿದರು. ಎನ್.ಜಿ.ಭಟ್ಟ ಅವಲೋಕನದ ಮೂಲಕ ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts