ಹಿಂದು ಮಹಾಗಣಪತಿ ಅದ್ದೂರಿ ಮೆರವಣಿಗೆ

Hindu_Maha
Published on

ತುಮಕೂರು: ವಿಶ್ವ ಹಿಂದು ಪರಿಷತ್​, ಬಜರಂಗದಳದ 8ನೇ ವರ್ಷದ ಹಿಂದು ಮಹಾಗಣಪತಿ ವಿಸರ್ಜನಾ ಮಹೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು.

ನಗರದ ಬಿ.ಎಚ್​.ರಸ್ತೆಯ ಸೋಮೇಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯನ್ನು ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಮಂಗಳವಾದ್ಯ, ಕಲಾ ಮೇಳಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಗಣಪನ ಉತ್ಸವದಲ್ಲಿ ಯುವಜನತೆ, ಕಾಲೇಜು ವಿದ್ಯಾರ್ಥಿಗಳ ಕುಣಿದು ಕುಪ್ಪಳಿಸಿದ್ದಲ್ಲದೆ, ಜಯಘೋಷಗಳು ಮುಗಿಲುಮುಟ್ಟಿದ್ದವು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಹೆಬ್ಬೂರು ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ಅಟಿವಿ ಸುಕ್ಷೇತ್ರದ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣ್ಣಸಿದ್ಧೇಶ್ವರ ಮಠದ ಬಿಂದುಶೇಖರ ಒಡೆಯರ್​ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್​.ಎಸ್​.ರವಿಶಂಕರ್​ , ಹಿಂದು ಮಹಾಗಣಪತಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ವೈ.ಎಚ್​.ಹುಚ್ಚಯ್ಯ, ಅಧ್ಯಕ್ಷ ಬಿ.ಎಸ್​.ಮಂಜುನಾಥ್​, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್​, ಡಾ.ಎಸ್​.ಪರಮೇಶ್​, ಸ್ವಚ್ಛ ಮಂಜುನಾಥ್​, ಎಚ್​.ಜಿ.ಚಂದ್ರಶೇಖರ್​, ಕೆ.ಜೆ.ರುದ್ರಪ್ಪ, ಸುರೇಶ್​ರಾವ್​, ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್​, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್​, ವಿಎಚ್​ಪಿ ಜಿಲ್ಲಾಧ್ಯಕ್ಷ ಪ್ರದಿಪ್​, ಟಿ.ಎಚ್​.ಹನುಮಂತರಾಜು, ಬಿ.ಎಚ್​.ನವಚೇತನ್​, ಟಿ.ಆರ್​.ಸದಾಶಿವಯ್ಯ ಸೇರಿದಂತೆ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆ ಪದಾಧಿಕಾರಿಗಳು, ಪ್ರಮುಖರು ಉತ್ಸವದಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಗೆ ಮುನ್ನ ವಿಧಾನ ಪರಿಷತ್​ ಕಾಂಗ್ರೆಸ್​ ಸದಸ್ಯಆರ್​.ರಾಜೇಂದ್ರ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿದರು.

ಶಿವಕುಮಾರ ಶ್ರೀಗಳ ಪುತ್ಥಳಿ

ಕಾಯಕಯೋಗಿ ಡಾ.ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಯೊಂದಿಗೆ ಭಾರತ ಮಾತೆ, ಶ್ರೀರಾಮ, ಆಂಜನೇಯ, ಶಿವ, ವರಹಾ ಸ್ವಾಮಿ, ಆಪರೇಷನ್​ ಸಿಂಧೂರದಲ್ಲಿ ಬಳಕೆಯಾದ ಬ್ರಹ್ಮೋಸ್​ಕ್ಷಿಪಣಿಯ ಸ್ತಬ್ಧ ಚಿತ್ರಗಳು, ಬಾಲಗಂಗಾಧರತಿಲಕ್​, ಶಿವಾಜಿ ಮೊದಲಾದವರ ಭಾವಚಿತ್ರಗಳು ಗಣಪತಿ ವಿಸರ್ಜನಾ ಮಹೋತ್ಸವದ ಪ್ರಮುಖ ಆಕರ್ಷಣೀಯವಾಗಿದ್ದವು. ವಿವಿಧ ಕಲಾತಂಡಗಳು, ಮಂಗಳ ವಾದ್ಯಗಳು, ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ನಾಸಿಕ್​ ಡೋಲು ಮತ್ತಿತರ ಜಾನಪದ ಕಲಾ ತಂಡಗಳ ಮೆರವಣಿಗೆಯ ವೈಭವ ಹೆಚ್ಚಿಸಿದವು. ಶ್ರೀ ಜಗದ್ಗುರು ರೇಣುಕಾಚಾರ್ಯ ವೃತ್ತ (ಭದ್ರಮ್ಮ ವೃತ್ತ), ಬಿ.ಹೆಚ್​.ರಸ್ತೆ, ಬಿಜಿಎಸ್​ ವೃತ್ತ (ಟೌನ್​ ಹಾಲ್​ ವೃತ್ತ), ಲಕ್ಕಪ್ಪ ವೃತ್ತದ ಮೂಲಕ ಜೆ.ಸಿ.ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಸ್ವತಂತ್ರಚೌಕ, ಅಶೋಕ ರಸ್ತೆ ಮುಖಾಂತರ ಗಾಯತ್ರಿ ಚಿತ್ರಮಂದಿರ, ಎಂ.ಜಿ.ರಸ್ತೆ, ರಾಮಪ್ಪ ವೃತ್ತ, ಕೋಟೆಆಂಜನೇಯಸ್ವಾಮಿ ಸಾಗಿದ ಮೆರವಣಿಗೆ ಕೆಎನ್​ಎಸ್​ ಕಲ್ಯಾಣಿ ಬಳಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net