

ಬೈಂದೂರು: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮೇಶ್ವರ-ದೊಂಬೆ ರಸ್ತೆಯಂಚಿನಲ್ಲಿ ಗುಡ್ಡ ಕುಸಿದಿದೆ. ಕೆಲ ದಿನಗಳ ಹಿಂದೆ ತಳಭಾಗದ ಒಂದು ಬದಿ ಕುಸಿದಿತ್ತು. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಶುಕ್ರವಾರದಿಂದ ಗುಡ್ಡ ಕುಸಿತ ಉಂಟಾಗಿದೆ.
ಬೃಹತ್ ಗಾತ್ರದ ಕಲ್ಲುಗಳು ರಸ್ತೆಗೆ ಉರುಳುತ್ತಿವೆ. ಕಳೆದ ವರ್ಷ ಸೋಮೇಶ್ವರ ದೇವಸ್ಥಾನದ ಮೇಲ್ಗಡೆ ಗುಡ್ಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ ಕಾರಣ ಗುಡ್ಡ ಕುಸಿತವಾಗುತ್ತಿದೆ. ಈ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಕಟ್ಟಡ ಪರವಾನಗಿ ರದ್ದುಪಡಿಸಿದ್ದರು. ಆದರೆ ಈ ವರ್ಷ ಗುಡ್ಡದ ಇನ್ನೊಂದು ಭಾಗದಲ್ಲಿ ಕುಸಿಯಲು ಆರಂಭವಾಗಿದೆ. ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದ ಕೆಳಭಾಗದಲ್ಲಿ ಮೀನುಗಾರರ ಮನೆಗಳಿದ್ದು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ.
ಗುಡ್ಡ ಕುಸಿತವಾದ ಪ್ರದೇಶಕ್ಕೆ ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಯಂಚಿನ ಮಣ್ಣು ತೆರವುಗೊಳಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ.ಪಡುವರಿ, ಪಡುವರಿ ಗ್ರಾಪಂ ಮಾಜಿ ಸದಸ್ಯ ಸಂಜೀವ ಮೊಗವೀರ ಮೊದಲಾದವರು ಇದ್ದರು.