ಅನುದಾನ ನೀಡದಿದ್ದಲ್ಲಿ ಪಾದಯಾತ್ರೆ ಅನಿವಾರ್ಯ

IMG-20250403-WA0174
ಶಾಸಕ ಎಚ್.ಟಿ.ಮಂಜು
Published on

ಕೆ.ಆರ್.ಪೇಟೆ: ಅಭಿವೃದ್ಧಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುವುದಾಗಿ ಶಾಸಕ ಎಚ್.ಟಿ.ಮಂಜು ಘೋಷಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬಂದಾಗಿನಿಂದ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕಳೆದ ಎರಡೂ ಅಧಿವೇಶನದಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಬೇಕಾದ ಅನುದಾನಕ್ಕಾಗಿ ಎಷ್ಟೇ ಮನವಿ ಮಾಡಿದರೂ ಸರ್ಕಾರವಾಗಲಿ, ಸಂಬಂಧಿಸಿದ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಾಗಲಿ ಸ್ಪಂದಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ ತಾಲೂಕಿನಲ್ಲಿ ಬಾರಿ ಮಳೆಯಾಗಿ ಕೆರೆಗಳು ಒಡೆದಿದ್ದವು. ಜತೆಗೆ ರಸ್ತೆಗಳು ಕೂಡ ಹಾಳಾಗಿದ್ದವು. ಒಡೆದ ಕೆರೆಗಳ ದುರಸ್ತಿಗಾದರೂ ಅನುದಾನ ಬಿಡುಗಡೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಇಂದಿಗೂ ಅನುದಾನ ದೊರೆತಿಲ್ಲ. ಅದಲ್ಲದೆ ದಿ.ಕೆಂಗೇಗೌಡ ಸಭಾ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಆರ್.ಪೇಟೆಗೆ ಆಗಮಿಸಿದ್ದ ವೇಳೆ ವೇದಿಕೆಯಲ್ಲಿ ಫೋಟೋಗಳ ಸಮೇತ ವಿವರಿಸಿ ಮನವಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಭರವಸೆ ಕೂಡ ನೀಡಿದ್ದರು. ಆದರೆ, ಮುಂದೇನಾಯ್ತು ಎಂಬುದು ಗೊತ್ತಿಲ್ಲ. ಯಾವುದಕ್ಕೂ ಉತ್ತರ ದೊರೆಯಲಿಲ್ಲ. ಸಂಬಂಧಿಸಿದ ಕೆಲವು ಇಲಾಖೆಗಳಿಗೆ ಹತ್ತಾರು ಬಾರಿ ಅಲೆದಿದ್ದೇನೆ. ಆದರೆ, ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ವಿರೋಧ ಪಕ್ಷದ ಜೆಡಿಎಸ್ ಶಾಸಕ ಅನುದಾನ ನಿರೀಕ್ಷೆ ಮಾಡುವುದು ಕಷ್ಟಕರವಾದ ವಿಷಯ. ನಾನು ಕಷ್ಟದ ಸಮಯದಲ್ಲಿ ಶಾಸಕನಾಗಿದ್ದು, ತಾಲೂಕಿನ ಜನತೆಗೆ ಉತ್ತರ ನೀಡುವುದು ಕಷ್ಟಕರವಾಗಿದೆ. ಕೆಲವರಿಗೆ ಅರ್ಥವಾಗಬಹುದು. ಆದರೆ, ಇನ್ನೂ ಹಲವರಿಗೆ ನನ್ನ ಪರಿಸ್ಥಿತಿ ಏನೆಂಬುದು ಸ್ಪಷ್ಟವಾಗಿ ಅರ್ಥವಾಗಲ್ಲ, ಯಾವುದೇ ಗ್ರಾಮಗಳಿಗೆ ಹೋದರೂ ಸಾರ್ವಜನಿಕರು ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಈ ಎಲ್ಲ ವಿಚಾರಗಳನ್ನು ಅವಲೋಕಿಸಿ ಅಂತಿಮವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಅಭಿವೃದ್ಧಿಗಾಗಿ ಅನುದಾನ ತಂದು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕಿದ್ದು, ನಮ್ಮ ಪಕ್ಷದ ವರಿಷ್ಠರು ಕ್ಷೇತ್ರದ ಮುಖಂಡರು, ಕಾರ್ಯಕರ್ತರೊದಿಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net