

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಸೀಯಾಳ (ಬೊಂಡ) ದರ ನೋಡ ನೋಡುತ್ತಿದ್ದಂತೆಯೇ 60ರೂ. ಗಡಿ ತಲುಪಿದೆ. ಆದರೂ ಬೇಡಿಕೆ ಕಡಿಮೆ ಆಗಿಲ್ಲ. ಬೇಡಿಕೆ ಇದ್ದಷ್ಟು ಎಲ್ಲಿಯೂ ಎಳನೀರು ಇಲ್ಲ. ಬೆಳಗ್ಗೆ 11ಕ್ಕೆ ಎಳನೀರು ಇಲ್ಲ ಎನ್ನುವ ಉತ್ತರ ವ್ಯಾಪಾರಿಗಳಿಂದ ದೊರೆಯುತ್ತದೆ. ಇಷ್ಟಲ್ಲದೆ ಎಳನೀರು ದೊರೆಯದ ಕಾರಣ ಅನೇಕ ಎಳನೀರು ವ್ಯಾಪಾರಿಗಳು ಅಂಗಡಿಯನ್ನೇ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಈ ಬಾರಿಯ ಸೀಜನ್‌ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಬದಿಗಟ್ಟಿ ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಒಂದು ಸೀಯಾಳ ಬೆಲೆ 25ರಿಂದ 30 ಇದ್ದುದು ಏರಿಕೆಯಾಗುತ್ತಾ 40, 50 ಆಗಿ ಈಗ 60 ರೂ. ತಲುಪಿದೆ. ಕಳೆದ ವರ್ಷ ಇದೇ ಸಂದರ್ಭ 35 ರೂ.ವರೆಗೆ ಏರಿತ್ತು. ಬಿಸಿಲ ಬೇಗೆಗೆ ನೊಂದು ಬೆಂದ ಗ್ರಾಹಕರು ಬೊಂಡಕ್ಕಾಗಿ ಅಂಗಡಿಯಲ್ಲಿ ಕಾಯುತ್ತಿದ್ದರೆ, ರೋಗಿಗಳಿಗೆ, ಎಳನೀರು ಅನಿವಾರ್ಯ ಆದವರಿಗೆ ಎಲ್ಲೆಲ್ಲೂ ಸುತ್ತಾಡುವುದೇ ಕೆಲಸ. ಶುಭ ಕಾರ್ಯಗಳಿಗೆ ಸೀಯಾಳ ಹುಡುಕಿಕೊಂಡು ಹೋಗುವುದು ಅನಿವಾರ್ಯವಾಗಿದೆ.
ಕಡೂರು, ಬೀರೂರು, ಹಾಸನ ಕಡೆಯಿಂದ ರೈತರು ತೋಟದಿಂದ ತಂದು ಉಡುಪಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಅಲ್ಲೂ ದೊರೆಯುತ್ತಿಲ್ಲ. ಬೆಳೆದ ರೈತರಿಗೆ ಇದರಿಂದ ಅಷ್ಟೇನೂ ಲಾಭ ಇಲ್ಲ. ಏಕೆಂದರೆ ದರ ಏರುತ್ತಿದ್ದಂತೆಯೇ ರೈತರು ಮಾರಾಟ ಮಾಡಿಯಾಗಿದೆ. ಈಗ ಮರದಲ್ಲೂ ಇಲ್ಲ. ಮಾರುವರು ಕನಿಷ್ಠ 20 ರೂ.ವರೆಗೆ ಲಾಭ ಇಟ್ಟು ಮಾರಿದ್ದೂ ಇದೆ. ಒಟ್ಟಿನಲ್ಲಿ ಎಳನೀರಿನ ಬದಲು ಕಬ್ಬಿನಹಾಲು ಮೊದಲಾದ ಪರ್ಯಾಯ ಪಾನೀಯದ ಮೊರೆ ಹೋಗಬೇಕಾದ ಅನಿವಾರ್ಯ ಉಂಟಾಗಿದೆ.