

ವಿಜಯವಾಣಿ ಸುದ್ದಿಜಾಲ ಗುರುಪುರ
ವಾಮಂಜೂರಿನ ಜನವಸತಿ ಪ್ರದೇಶವಾದ ಓಂಕಾರ ನಗರದಲ್ಲಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದ ಪರ ಜಿಲ್ಲಾಡಳಿತ ಏಕಪಕ್ಷೀಯ ತೀರ್ಪು ನೀಡಿದೆ ಎಂದು ಆರೋಪಿಸಿದ ಅಣಬೆ ಫ್ಯಾಕ್ಟರಿ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ಭಾನುವಾರ ಪಾದಯಾತ್ರೆಯ ಮೂಲಕ ಸ್ಥಳೀಯ ಸರ್ವಧರ್ಮೀಯರ ಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ನೀಡಿದ್ದ ಸಮಿತಿ, ವಾಮಂಜೂರಿನಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿ ಅಣಬೆ ಫ್ಯಾಕ್ಟರಿಯ ದುರ್ವಾಸನೆ ತಡೆಯುವಂತೆ ಹಾಗೂ ವಿಷಯುಕ್ತ ರಾಸಾಯನಿಕ ಅನಿಲ ಹರಡದಂತೆ ಮಾಡಲು ಆಗ್ರಹಿಸಿತ್ತು. ಒಂದು ಹಂತದಲ್ಲಿ ಪ್ರತಿಭಟನೆಗೆ ಮಣಿದ ಜಿಲ್ಲಾಧಿಕಾರಿ, ದುರ್ವಾಸನೆಮುಕ್ತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಫ್ಯಾಕ್ಟರಿ ಆಡಳಿತಕ್ಕೆ ಸೂಚಿಸಿ ಅಲ್ಲಿ ತನಕ ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದ್ದರು.
ಳಿಕ ಡಿಸಿ ಆದೇಶದಲ್ಲಿ ಸೂಚಿಸಿದಂತೆ ಮನಪಾ ಆಯುಕ್ತರು, ಪರಿಸರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಒಳಗೊಂಡ ತಜ್ಞರ ಸಮಿತಿ, ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಫ್ಯಾಕ್ಟರಿ ಮಾಲೀಕರ ಪರ ವರದಿ ನೀಡಿದೆ ಎಂದು ಆರೋಪಿಸಿರುವ ಫ್ಯಾಕ್ಟರಿ ವಿರೋಧಿ ಸಮಿತಿ ಕಾರ್ಯಕರ್ತರು ಭಾನುವಾರ ವಾಮಂಜೂರಿನ ಶ್ರೀರಾಮ ಭಜನಾ ಮಂದಿರದಿಂದ ಪಾದಯಾತ್ರೆ ಮೂಲಕ ಇಸ್ಲಾವುಲ್ ಇಸ್ಲಾಂ ಜುಮಾ ಮಸೀದಿ, ಶ್ರೀ ಅಮೃತೇಶ್ವರ ದೇವಸ್ಥಾನ ಮತ್ತು ಸೇಂಟ್ ಜೋಸೆಫ್ ದಿ ವರ್ಕರ್ಸ್ ಚರ್ಚ್‌ಗೆ ಭೇಟಿ ನೀಡಿ, ಸಂತ್ರಸ್ತರಿಗೆ ಪರಿಸರದಲ್ಲಿ ಶುದ್ಧ ಗಾಳಿ, ಶುದ್ಧ ನೀರು ಮತ್ತು ನ್ಯಾಯೋಚಿತವಾಗಿ ಬದುಕುವ ಅವಕಾಶ ಕರುಣಿಸುವಲ್ಲಿ ಫ್ಯಾಕ್ಟರಿ ಮಾಲೀಕರಿಗೆ ಬುದ್ಧಿ ಕೊಡಬೇಕೆಂದು ಪ್ರಾರ್ಥನೆ ಸಲ್ಲಿಸಿದರು.
ವಾಮಂಜೂರಿನ ಮಸೀದಿಯಲ್ಲಿ ಧರ್ಮಗುರು ಫಾಯಿಝ್ ಫಾಲಿಲ್ ಕೂಳೂರು ಸಂತ್ರಸ್ತರ ಪರ ದೇವರಲ್ಲಿ ಪ್ರಾರ್ಥಿಸಿದರು. ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ವಾಮಂಜೂರು ಸಮ್ಮುಖ ಸಂತ್ರಸ್ತರು ಪ್ರಾರ್ಥನೆ ಸಲ್ಲಿಸಿದರು. ವಾಮಂಜೂರಿನ ಸೇಂಟ್ ಜೋಸೆಫ್ ದಿ ವರ್ಕರ್ಸ್ ಚರ್ಚ್‌ನ ಗ್ರೆಟ್ಟೋದೆದುರು ಜೇಮ್ಸ್ ಡಿಸೋಜ ಸಮ್ಮುಖ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್, ಜಗದೀಶ ಶೇಣವ, ಓಂಪ್ರಕಾಶ್ ಶೆಟ್ಟಿ, ರಿಯಾಜ್ ವಾಮಂಜೂರು, ರಘು ಸಾಲ್ಯಾನ್, ಶ್ರೀನಿವಾಸ ಸುವರ್ಣ ಮಲ್ಲೂರು, ಲಕ್ಷ್ಮಣ್ ಶೆಟ್ಟಿಗಾರ, ರಾಜಕುಮಾರ್ ಶೆಟ್ಟಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ರೆಹಮಾನ್, ಹಮೀದ್ ಕೈಕಂಬ, ರಜಾಕ್ ವಾಮಂಜೂರು, ಸಲಾಂ, ಅನ್ವರ್, ಹರಿಪ್ರಸಾದ್ ಶೆಟ್ಟಿ ಮೂಡುಶೆಡ್ಡೆ, ಸತೀಶ್ ಶೆಟ್ಟಿ ಮೂಡುಜೆಪ್ಪು, ನಳಿನಿ ಶೆಟ್ಟಿ ಗುರುಪುರ, ಶ್ಯಾಮರಾಯ ಆಚಾರ್ಯ, ಸುರೇಂದ್ರ ಗುರುಪುರ, ದಿನೇಶ್ ಕರ್ಕೇರ ಕೆತ್ತಿಕಲ್, ಉಮೇಶ್ ಶೆಟ್ಟಿ ಮೂಡುಶೆಡ್ಡೆ, ಜಯಪ್ರಭಾ, ಅನಿಲ್ ರೈ ವಾಮಂಜೂರು, ಉಪನ್ಯಾಸಕ ರಮಾನಂದ ಎಚ್.ಎಸ್., ಕ್ಯಾರೆನ್ ಡಿಸೋಜ, ಕಾರ್ಮಿನ್ ಲೋಬೊ, ಆಶಿತಾ ಆಳ್ವ, ಸುನೀಲ್ ಕುಮಾರ್, ಗಾಯತ್ರಿ ಆಳ್ವ, ಪುರುಷೋತ್ತಮ, ಪದ್ಮನಾಭ ವಾಮಂಜೂರು, ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು ಹಾಗೂ ಸಂತ್ರಸ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಗ್ರಾಮಾಂತರ(ವಾಮಂಜೂರು) ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಲ್ಲಾಡಳಿತ ರಚಿಸಿದ ಸಮಿತಿಯ ತಜ್ಞರು ಒಂದು ತಿಂಗಳ ಅವಧಿಯಲ್ಲಿ ಯಾವನೇ ಒಬ್ಬ ಸಂತ್ರಸ್ತರನ್ನು ಮಾತನಾಡಿಸಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಿದೆ. ಇದನ್ನು ಹೋರಾಟ ಸಮಿತಿ ಯಾವತ್ತೂ ಒಪ್ಪುವುದಿಲ್ಲ. ಫ್ಯಾಕ್ಟರಿಯಲ್ಲಿ ದುರ್ವಾಸನೆಮುಕ್ತಗೊಳಿಸಲು ಸೂಕ್ತ ವೈಜ್ಞಾನಿಕ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈಗಲೂ ದುರ್ವಾಸನೆ ಬೀರುತ್ತಿದ್ದು, ಪ್ರದೇಶದ ಜನರ ಬದುಕು ದುಸ್ತರವಾಗಿದೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಶೀಘ್ರ ತೀರ್ಮಾನಿಸುತ್ತೇವೆ ಎಂದು ಹೋರಾಟ ಸಮಿತಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.