11 ಗಂಟೆ ನಂತರ ಹೆದ್ದಾರಿ ಬಳಿ ಹೋಟೆಲ್‌ಗಳು ಬಂದ್

IMG-20240528-WA0157
Published on

ಆಲೂರು: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರು.


ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಯೋಗದಲ್ಲಿ ಬುಧವಾರ ರಸ್ತೆ ಸುರಕ್ಷತೆ ಕುರಿತು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ, ಸರ್ವೀಸ್ ರಸ್ತೆಗಳಲ್ಲಿ ವಾಹನಗಳು ನಿಲ್ಲದಂತೆ ಸೂಚನೆ ನೀಡಬೇಕು. ರಾತ್ರಿ ಹೋಟೆಲ್‌ಗಳನ್ನು ನಿಗದಿತ ಸಮಯಕ್ಕೆ ಮುಚ್ಚಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಆಲೂರು ತಾಲೂಕು ಕೇಂದ್ರಕ್ಕೆ ತಿರುವು ಪಡೆಯಲು ಫ್ಲೆ ಓವರ್ ನಿರ್ಮಾಣ ಮಾಡಬೇಕು. ಮಾವನೂರು ಮತ್ತು ಕಿರಗಡಲು ಕೂಡಿಗೆ ಬಳಿ ಇಳಿಜಾರು ಪ್ರದೇಶದಲ್ಲಿರುವ ಮನೆಗಳಿಗಿಂತ ರಸ್ತೆ ಸುಮಾರು ಹತ್ತಾರು ಅಡಿ ಎತ್ತರದಲ್ಲಿರುವುದರಿಂದ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು. ಭೈರಾಪುರದಲ್ಲಿರುವ ಬೆಥೆಸ್ತ ಶಾಲೆ ಮತ್ತು ಸೊಪ್ಪಿನಹಳ್ಳಿ ಗ್ರಾಮಕ್ಕೆ ಸಂಚರಿಸಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಕೋರಿದರು.


ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾತನಾಡಿ, ಹೆದ್ದಾರಿಯಿಂದ ಆಲೂರಿಗೆ ತಿರುವು ಪಡೆದುಕೊಳ್ಳುವ ಸ್ಥಳದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಈಗಾಗಲೇ ಯೋಜನಾ ಪಟ್ಟಿಗೆ ಸೇರಿಸಲಾಗಿದೆ. ಸದ್ಯಕ್ಕೆ ಸಂಚಾರ ಸುರಕ್ಷತೆ ಫಲಕಗಳನ್ನು ಹಾಕಲಾಗುವುದು. ಶೀಘ್ರದಲ್ಲಿ ಹೆದ್ದಾರಿಗೊಳಪಡುವ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಅಗತ್ಯವಿರುವೆಡೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 11 ಗಂಟೆಗೆ ಹೆದ್ದಾರಿ ಬದಿಯಲ್ಲಿರುವ ಹೋಟೆಲ್‌ಗಳನ್ನು ಮುಚ್ಚಿಸಲಾಗುವುದು ಎಂದು ಭರವಸೆ ನೀಡಿದರು.


ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ಹೆದ್ದಾರಿಯಲ್ಲಿರುವ ಅಪಘಾತ ಸ್ಥಳಗಳಲ್ಲಿ ಚಾಲಕರಿಗೆ ಮುನ್ಸೂಚನೆ ನೀಡಲು 10 ಮಿಮೀ ಗಾತ್ರದ ರಬ್ಬರ್ ಉಬ್ಬುಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.


ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ, ಮುಖಂಡರಾದ ಪಿ. ಎಲ್.ಲಿಂಗರಾಜು, ಜಗದೀಶ್ ನಿಡನೂರು, ಬೆಟ್ಟೇಗೌಡ, ಆಟೋ ಹರೀಶ್, ಗಿರಿಜಮ್ಮ, ಗಿರೀಶ್, ಶಾಂತಕೃಷ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net