ಸಂಚಾರಕ್ಕೆ ಸಂಚಕಾರವಾದ ಹೈವೇ ಕಾಮಗಾರಿ ಲಾರಿಗಳು

Mbd_Highway construction
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ತೆಂಕಮಿಜಾರು, ಪುತ್ತಿಗೆ, ಬೆಳುವಾಯಿ, ಪಡುಮಾರ್ನಾಡು ಗ್ರಾಮಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳಲ್ಲೇ ಅತೀ ವೇಗ, ಅಜಾಗರೂಕತೆಯಿಂದ ಕಾಮಗಾರಿ ನಿರ್ವಹಿಸುವ ವಾಹನಗಳು ಓಡಾಡುತ್ತಿದ್ದು, ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ತೆಂಕಮಿಜಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ನೀರ್ಕೆರೆ ಸಂತೆಕಟ್ಟೆಯ ವಿವಿಧೋದ್ದೇಶ ಸಭಾಂಗಣದಲ್ಲಿ ಮಂಗಳವಾರ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಅಧ್ಯಕ್ಷತೆಯಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ಗ್ರಾಮಸ್ಥರು ಗಮನಸೆಳೆದರು.

ಗುತ್ತಿಗೆದಾರರ ವಾಹನಗಳು ಅತಿವೇಗದೊಂದಿಗೆ ಇತರ ವಾಹನಗಳನ್ನು ಓವರ್ ಟೇಕ್ ಮಾಡುವುದೂ ಅಪಾಯಕಾರಿಯಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲೆ ಕಾಲೇಜುಗಳ ವಾಹನಗಳು, ಖಾಸಗಿ ಬಸ್‌ಗಳು ಕಾಮಗಾರಿ ಗುತ್ತಿಗೆಯ ವಾಹನಗಳಿಂದ ಅಪಾಯವನ್ನು ಎದುರಿಸುತ್ತಿವೆ ಎಂದು ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಸಹಿತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ನಂಬರ್ ಪ್ಲೇಟ್ ಇಲ್ಲದೆ ಲಾರಿಗಳು ಸಂಚರಿಸುತ್ತಿದ್ದು, ಅವಘಡಗಳು ಸಂಭವಿಸಿದಾಗ ಅವುಗಳನ್ನು ಗುರುತಿಸುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ರಾ.ಹೆ. ಪ್ರಾಧಿಕಾರದ ಸಲಹೆಗಾರ ಸಾತ್ವಿಕ್ ಮಾತನಾಡಿ, ನಿಯಮ ಪಾಲಿಸುವಂತೆ ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದರು.

ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರಕ್ಕೆ ಕರಿಕುಮೇರಿನಲ್ಲಿ ಜಾಗ ಆಗಿದೆ ಎಂದು ಪ್ರತಿ ಗ್ರಾಮಸಭೆಯಲ್ಲಿ ಹೇಳಲಾಗುತ್ತದೆ. ಆದರೆ ಫಾಲೋ ಅಪ್ ಮಾಡುತ್ತಿಲ್ಲ ಏಕೆ ಎಂದು ಶಶಿಕಾಂತ ಶೆಟ್ಟಿಗಾರ್ ಪ್ರಶ್ನಿಸಿದರು. ಪಿಡಿಒ ರೋಹಿಣಿ ಪ್ರತಿಕ್ರಿಯಿಸಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ರಾ.ಹೆ. ಪಕ್ಕದ ಹಳೆ ರಸ್ತೆಯ ನಿರ್ವಹಣೆ ಯಾರದ್ದು ಎಂದು ಬಿ.ಎಲ್.ದಿನೇಶ್ ಕುಮಾರ್ ಕೇಳಿದಾಗ ರಾ.ಹೆ. ಕೆಲಸ ಪೂರ್ಣವಾಗಿ ಎರಡು ವರ್ಷಗಳ ಬಳಿಕ ಅದನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಲಾಗುವುದು ಎಂದು ಸಾತ್ವಿಕ್ ತಿಳಿಸಿದರು.

ತೋಟಗಾರಿಕೆ ಇಲಾಖಾ ಅಧಿಕಾರಿ ಮಹೇಶ್ ನೋಡಲ್ ಅಧಿಕಾರಿಯಾಗಿದ್ದರು. ವಿವಿಧ ಫಲಾನುಭವಿಗಳಿಗೆ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಚೆಕ್ ವಿತರಿಸಿದರು. ದ್ವಿತೀಯ ದರ್ಜೆ ಸಹಾಯಕ ರಮೇಶ ಬಂಗೇರ ನಿರ್ಣಯಗಳನ್ನು ದಾಖಲಿಸಿದರು. ಸಿಬ್ಬಂದಿ ರಾಕೇಶ್ ಭಟ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net