3ನೇ ಹಂತದ ಹೆದ್ದಾರಿ ವಿಸ್ತರಣೆ ಶೀಘ್ರ

20byd1
Published on

ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ಹೆದ್ದಾರಿ ವಿಸ್ತರಣೆ ಮೂರನೇ ಹಂತದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಕಾಯ್ದೆಬದ್ಧವಾಗಿ ನಡೆಯುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ತಾಲೂಕಿನ ಮೋಟೆಬೆನ್ನೂರು ಗ್ರಾಮದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಪರಿಹಾರಕ್ಕಾಗಿ 15.6 ಕೋಟಿ ರೂ. ಮಂಜೂರಾಗಿತ್ತು. ಬಳಿಕ 1.56 ಕೋ.ರೂ. ಅನುದಾನದೊಂದಿಗೆ 1 ಕೋಟಿ ರೂ. ಹೆಚ್ಚುವರಿ ಸೇರಿ ಒಟ್ಟು 2.56 ಕೋಟಿ ರೂ. ಮಂಜೂರಾಗಿದೆ. ಇನ್ನುಳಿದ ಪರಿಹಾರದ ಮೊತ್ತಕ್ಕಾಗಿ ಲೋಕೋಪಯೋಗಿ ಇಂಜಿನಿಯರರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

66 ಅಡಿ ಭೂಸ್ವಾಧೀನ: ಮುಖ್ಯರಸ್ತೆಯ ವಿಸ್ತರಣೆಗಾಗಿ 66 ಅಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಚರಂಡಿ, ದ್ವಿಭಜಕ, ಹೈಮಾಸ್ಟ್, ಸಿ.ಸಿ. ಕ್ಯಾಮರಾ ಹಾಗೂ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೊಸ ಕಟ್ಟಡಗಳಿಗೆ ಪುರಸಭೆ ನಿಯಮದಂತೆ ಅನುಮತಿ ನೀಡಲಿದೆ. ಇದಕ್ಕಿಂತ ಹೆಚ್ಚು ಭೂಸ್ವಾಧೀನ ಮಾಡುವುದಿಲ್ಲ, ಕೆಲವರು ಗಾಳಿಸುದ್ದಿ ಹರಡಿಸಿ, ಭೂಮಾಲೀಕರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಇಂತಹುದಕ್ಕೆ ಅವಕಾಶ ನೀಡಬೇಡಿ ಎಂದರು.

ಸರ್ಕಾರದ ಕೆವಿಯಟ್: ಮುಖ್ಯರಸ್ತೆ ವಿಸ್ತರಣೆಯ ಪರವಾಗಿ ಸರ್ಕಾರದ ವತಿಯಿಂದ ಹೈಕೋರ್ಟ್​ನಲ್ಲಿ ಕೆವಿಯಟ್ ಹಾಕಲಾಗಿದೆ. ಕೆಲವರು ಮುಖ್ಯರಸ್ತೆ ವಿಸ್ತರಣೆ ಮಾಡದಂತೆ ಕೋರ್ಟ್​ನಿಂದ ಸ್ಟೇ ತರುವುದಾಗಿ ಮಾಲೀಕರಿಂದ ಹಣ ಸಂಗ್ರಹಿಸುವ ಸುದ್ದಿ ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಇಂತಹ ವಿಚಾರಕ್ಕೆ ಕಿವಿಗೊಡಬಾರದು. ಈಗಾಗಲೇ ಎಸ್​ಐಎಸ್ ಮಾಡಲು ಸರ್ಕಾರ ವಿನಾಯಿತಿ ನೀಡಿರುವುದರಿಂದ ವಿಸ್ತರಣೆ ಕಾಮಗಾರಿ ವಿಳಂಬವಾಗುವುದಿಲ್ಲ. ಮೊದಲ ಹಂತದಲ್ಲಿ ಜೂ. 5ರಂದು ಜಿಲ್ಲಾಧಿಕಾರಿ ಕಾನೂನು ಪಕ್ರಿಯೆ ಮೂಲಕ ಭೂಸ್ವಾಧೀನ ಕಾರ್ಯವನ್ನು ಕೈಗತ್ತಿಕೊಂಡಿದ್ದಾರೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಯುವ ಘಟಕದ ಅಧ್ಯಕ್ಷ ವಿನಯಕುಮಾರ ಹಿರೇಮಠ, ಮುಖಂಡರಾದ ವೀರೇಂದ್ರ ಶೆಟ್ಟರ, ಶಿವಯೋಗಿ ಶಿರೂರ, ವಕೀಲ ನಿಂಗಪ್ಪ ಬಟ್ಟಲಕಟ್ಟೆ, ಸುರೇಶ ಚಲವಾದಿ, ಕಿರಣ ಎಂ.ಎಲ್. ಇದ್ದರು.

ಅನ್ಯಾಯವಾಗಲು ಬಿಡಲ್ಲ: ರಸ್ತೆ ಕಾಮಗಾರಿ ವೇಳೆ ಭೂಮಿ ಕಳೆದುಕೊಂಡ ಮಾಲೀಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಸರ್ಕಾರದಿಂದ ಹೆಚ್ಚಿನ ಪರಿಹಾರ ಕೇಳಲು ಅವರಿಗೆ ಸಂಪೂರ್ಣ ಹಕ್ಕಿದೆ. ಅವರಿಗೆ ಹೆಚ್ಚಿನ ನೆರವು ಒದಗಿಸಲು ತಾವು ಕೈಜೋಡಿಸುತ್ತೇವೆ. ಇಲ್ಲಿ ಸಂಪೂರ್ಣವಾಗಿ ಭೂಮಿ ಕಳೆದುಕೊಂಡ ಮಾಲೀಕರಿಗೆ ಪರಿಹಾರದ ಜೊತೆ ಪುರಸಭೆ ವತಿಯಿಂದ ನಿವೇಶನ ಹಾಗೂ ಕಡಿಮೆ ದರದಲ್ಲಿ ವಾಣಿಜ್ಯ ಮಳಿಗೆಗಳನ್ನು ಮಂಜೂರಾತಿ ನೀಡಲು ಆದೇಶಿಸಲಾಗುವುದು ಎಂದು ಶಾಸಕ ಬಳ್ಳಾರಿ ತಿಳಿಸಿದರು.

ಅಭಿವೃದ್ಧಿಗೆ ಬದ್ಧ: ಬ್ಯಾಡಗಿ ರಸ್ತೆ ಅಗಲೀಕರ ಹೋರಾಟ ಸಮಿತಿ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಈ ಹಿಂದೆ ನಾವು 80 ಅಡಿ ರಸ್ತೆಯನ್ನು ವಿಸ್ತರಿಸುವಂತೆ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಸೇರಿ ಸಂಬಂಧಿಸಿದ ಅಧಿಕಾರಿಗಳು ಹೆಸ್ಕಾಂ ಗ್ರೀಡ್​ನಿಂದ ಅಗಸನಹಳ್ಳಿಯವರೆಗೂ 66 ಅಡಿ ರಸ್ತೆ ವಿಸ್ತರಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಮ್ಮ ಹೋರಾಟ, ಮಾಲೀಕರ, ಶಾಸಕರ ವಿರುದ್ಧವಲ್ಲ. ಸಾರ್ವಜನಿಕರಿಗೆ ರಸ್ತೆ ಕಿರಿಕಿರಿಯಾಗಿದ್ದು, ಜನಪರ ಹೋರಾಟ ನಡೆಸಿದ್ದೇವೆ ಎಂದು ಸ್ಟಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net