ಗಮನಸೆಳೆದ ಅಮೃತ ಕಳಶ ಯಾತ್ರೆ

13 rtl 01
Published on

ರಟ್ಟಿಹಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹುತಾತ್ಮ ವೀರ ಯೋಧರನ್ನು ಗೌರವಿಸುವ ನಿಟ್ಟಿನಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಇಒ ಟಿ.ಆರ್. ಮಲ್ಲಾಡದ ಹೇಳಿದರು.
ಪಟ್ಟಣದಲ್ಲಿ ಗುರುವಾರ ಜರುಗಿದ ಅಮೃತ ಕಳಶ ಯಾತ್ರೆಯಲ್ಲಿ ಅಮೃತ ಕಳಶವನ್ನು ನೆಹರು ಯುವ ಕೇಂದ್ರದ ರಾಷ್ಟಿ›ೕಯ ಸ್ವಯಂ ಸೇವಾ ಕಾರ್ಯಕ್ರಮ ಅಧಿಕಾರಿ ವಾಸಿಂ ಹತ್ತಿಮತ್ತೂರಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಯಲ್ಲಿ ಅಮೃತ ಉದ್ಯಾನ ನಿರ್ವಿುಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಸಂಗ್ರಹಿಸಿದ ಮಣ್ಣನ್ನು ಅಮೃತ ಉದ್ಯಾನವನದಲ್ಲಿ (ಅಮೃತ ವಾಟಿಕಾ) ಗಿಡಗಳನ್ನು ನೆಡಲು ಬಳಸಲಾಗುತ್ತಿದೆ. ಆ ಮೂಲಕ ನಮ್ಮ ದೇಶದ ಹುತಾತ್ಮ ವೀರ ಸೇನಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜ್​ನಿಂದ ಪ್ರಾರಂಭವಾದ ಅಮೃತ ಕಳಶಯಾತ್ರೆಯು ಭಗತಸಿಂಗ್ ವೃತ್ತ, ಫ್ರೆಂಡ್ಸ್ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ, ರಟ್ಟಿಹಳ್ಳಿ ತಾಲೂಕು ಪಂಚಾಯಿತಿ ತಲುಪಿತು.
ವೀರಭದ್ರೇಶ್ವರ ಸ್ವಾಮಿಯ ವೇಷ ಧರಿಸಿದ್ದ ಪುರವಂತರು ಮತ್ತು ವಿವಿಧ ವಾಧ್ಯಮೇಳದೊಂದಿಗೆ ಸಾಗಿ ಬಂದ ಈ ಅಮೃತ ಕಳಶ ಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು.
ಪ್ರಿಯದರ್ಶಿನಿ ಸಂಸ್ಥೆಯ ಕಾರ್ಯದರ್ಶಿ ಯು.ಎಂ. ಸಾಲಿ, ಮಾಜಿ ಸೈನಿಕರಾದ ಎಂ.ಆರ್. ಬಸನಾಳಮಠ, ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ಮುಖಂಡರಾದ ಬೀರೇಶ್ ಕರಡಣ್ಣನವರ,ಡಾ. ಎಚ್.ಬಿ ಕೆಂಚಳ್ಳಿ, ಎನ್​ಎಸ್​ಎಸ್ ಅಧಿಕಾರಿ ವಿಜಯಲಕ್ಷ್ಮಿ ರೂಳಿ, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಎನ್​ಎಸ್​ಎಸ್ ವಿದ್ಯಾರ್ಥಿಗಳು ಸೇರಿ ತಾ.ಪಂ. ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net