

ಕಲಬುರಗಿಯಲ್ಲಿ ೪೪.೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ | ೫ ವರ್ಷಗಳಲ್ಲಿಯೇ ದಾಖಲೆ ತಾಪಮಾನ
ಬಾಬುರಾವ ಯಡ್ರಾಮಿ ಕಲಬುರಗಿ
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸೂರ್ಯನ ಆರ್ಭಟ ಜೋರಾಗಿದೆ. ದಿನ ಕಳೆದಂತೆ ಬಿಸಿಲ ತಾಪ ಏರುತ್ತಲೇ ಇದ್ದು, ಉಷ್ಣ ಗಾಳಿಗೆ ಜನರು ಕಂಗೆಟ್ಟಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ದಾಖಲೆ ೪೪.೪ ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದು ದಾಖಲೆಯಾಗಿದೆ.
ಈ ಹಿಂದೆ ೨೦೧೯, ಮೇ ೨೧ ರಂದು ಕಲಬುರಗಿ ಜಿಲ್ಲೆಯಲ್ಲಿ ೪೪.೬ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ ಮತ್ತೊಮ್ಮೆ ೪೪ರ ಗಡಿ ದಾಟಿದೆ. ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ೪೪.೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೂ, ಅದರ ಅನುಭವ ೪೬ ಡಿಗ್ರಿ ಮೀರಿಸುವಂತಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಒಂದು ವಾರ ರಣಬಿಸಲು ಮುಂದುವರೆಯಲಿದೆ. ಬುಧವಾರ ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಕೆಲಹೊತ್ತು ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ಅಲ್ಲಿ ಬಿಸಿಲ ತಾಪ ಕೊಂಚ ಕಡಿಮೆ. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಂಜೆಯ ಹೊತ್ತಿಗೆ ಮೋಡ ಕವಿದಂತೆ ಕಂಡು ಬಂದಿತು.
ಕಾಳಗಿ ತಾಲೂಕು ಕೇಂದ್ರ ಹಾಗೂ ಸುತ್ತಲಿನ ಹಳ್ಳಿಗಳಾದ ಗೋಟೂರ, ಕೊಡದೂರು, ಟೆಂಗಳಿ, ಕಂದಗೂಳ, ರಾಜಾಪುರ, ಬೆಡಸೂರ ತಾಂಡಾ ಮೊದಲಾದ ಕಡೆಗಳಲ್ಲಿ ಬುಧವಾರ ೪೪.೪ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಚಿಂಚೋಳಿ ತಾಲೂಕಿನಲ್ಲಿ ೪೪.೩ ಡಿಗ್ರಿ ಸೆಲ್ಸಿಯಸ್, ಕಲಬುರಗಿ ತಾಲೂಕಿನ ಅವರಾದ ವಲಯದ ಹರಸೂರ, ಸಣ್ಣೂರ, ಮಹಾಗಾಂವ್, ಶ್ರೀನಿವಾಸ ಸರಡಗಿ, ಆಲಗೂಡ, ಅವರಾದನಲ್ಲಿ ೪೪.೩ ಹಾಗೂ ಆಳಂದ ತಾಲೂಕಿನ ನಿಂಬರ್ಗಾ ತಾಂಡಾದಲ್ಲಿ ೪೩.೨, ಕಲಬುರಗಿ ತಾಲೂಕಿನ ಕಡಣಿಯಲ್ಲಿ ೪೩.೯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಯಚೂರಿನಲ್ಲಿ ೧೯೨೮ರ ಮೇ ೨೩ರಂದು ದಾಖಲೆ ಎನ್ನುವಂತೆ ೪೫.೬ ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಇದು ಅತಿ ಹೆಚ್ಚಿನ ಬಿಸಿಲ ಆರ್ಭಟವಾಗಿತ್ತು. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ೨೦೨೨ ಮೇ ೧ ರಂದು ೪೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಆಳಂದ ತಾಲೂಕಿನ ದಣ್ಣೂರಿನಲ್ಲಿ ಬಿಸಿಲಾಘಾತಕ್ಕೆ ಕೂಲಿ ಕಾರ್ಮಿಕ ಮೃತಪಟ್ಟ ಬೆನ್ನಲ್ಲಿಯೇ ಜಿಲ್ಲಾಡಳಿತ ಜಾಗೃತಗೊಂಡಿದೆ. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ, ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಬಿಸಿಲ ತಾಪದಿಂದ ಬಳಲಿದವರಿಗೆ ಚಿಕಿತ್ಸೆ ನೀಡಲು ಜಿಮ್ಸ್ ಆಸ್ಪತ್ರೆಯಲ್ಲಿ ೧೦ ಬೆಡ್‌ಗಳನ್ನು ಮೀಸಲಿಡಲು ತಾಕೀತು ಮಾಡಿದ್ದಾರೆ.
ಬುಧವಾರದ ತಾಪಮಾನ
ಕಲಬುರಗಿ ಜಿಲ್ಲೆಯ ಕಾಳಗಿ ೪೪.೪ ಡಿಗ್ರಿ ಸೆಲ್ಸಿಯಸ್
ಕಲಬುರಗಿ ೪೨.೨೯ ಡಿಗ್ರಿ ಸೆಲ್ಸಿಯಸ್
ಬೀದರ್ ೩೯.೨೮ ಡಿಗ್ರಿ ಸೆಲ್ಸಿಯಸ್
ಯಾದಗಿರಿ ೪೨.೨೮ ಡಿಗ್ರಿ ಸೆಲ್ಸಿಯಸ್
ರಾಯಚೂರು ೪೧.೨೮ ಡಿಗ್ರಿ ಸೆಲ್ಸಿಯಸ್
ಬಳ್ಳಾರಿ ೪೧.೨೭ ಡಿಗ್ರಿ ಸೆಲ್ಸಿಯಸ್
----+