

ಹರಪನಹಳ್ಳಿ: ಮಕ್ಕಳ ಅಪೌಷ್ಟಿಕ ನಿವಾರಣೆಗೆ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡುವ ಸಂಖ್ಯೆಯಲ್ಲಿ ಸರ್ಕಾರ ಹೆಚ್ಚಳ ಮಾಡಿದೆ ಎಂದು ಶಾಸಕಿ ಎಂ.ಪಿ.ಲತಾಮಲ್ಲಿಕಾರ್ಜುನ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಲ್ಲಿ ಪ್ರೌಢ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಇದನ್ನೂ ಓದಿ: ವಿದ್ಯಾವಂತರಿಂದ ಮಾನವೀಯ ಮೌಲ್ಯ ಹರಣ
ಈವರೆಗೆ 1ರಿಂದ 8ನೇ ತರಗತಿ ವರೆಗೂ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು, ಇದೀಗ 9 ಹಾಗೂ 10ನೇ ತರಗತಿಯ ಮಕ್ಕಳಿಗೂ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತದೆ. ಮಕ್ಕಳು ಸದೃಢರಾಗುವುದರ ಜೊತೆಗೆ ಕಲಿಕೆಗೆ ಹೆಚ್ಚು ಒತ್ತು ಕೊಟ್ಟು ಉನ್ನತ ಸ್ಥಾನಗಳಿಸಲು ಶ್ರಮಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾವಂತರಾಗುವಂತೆ ತಿಳಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಯರಾಜ ಮಾತನಾಡಿ, ಮಕ್ಕಳ ಸದೃಢ ಆರೋಗ್ಯಕ್ಕಾಗಿ ಈ ಯೋಜನೆ ಜಾರಿ ಮಾಡಲಾಗಿದೆ ತಾಲೂಕಿನಲ್ಲಿ 319 ಅಡುಗೆ ಕೇಂದ್ರಗಳಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ ಎಂದು ಹೇಳಿದರು. ಶಾಸಕರು ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸಿದರು.ಅಧ್ಯಕ್ಷತೆಯನ್ನು ತಾಪಂ ಇಒ ಕೆ.ಆರ್.ಪ್ರಕಾಶ ವಹಿಸಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಮುಖ್ಯ ಶಿಕ್ಷಕ ರವೀಂದ್ರನಾಥ, ಶಿಕ್ಷಕರಾದ ಚೇತನಕುಮಾರ,ಹೊನ್ನಪ್ಪ, ದೈಹಿಕ ಶಿಕ್ಷಕ ಪರಸಪ್ಪ, ಯುವ ಮುಖಂಡರಾದ ಮಂಜನಾಯ್ಕ, ಶಂಕರ, ಶಿವರಾಜ, ಪ್ರಸಾದ ಕಾವಡಿ, ಅಕ್ಷರ ದಾಸೋಹ ಇಲಾಖೆ ನೌಕರ ನಾಗರಾಜ ಇತರರು ಇದ್ದರು.